ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಪಾಕ್ ಸೇನೆಯಿಂದ ಪ್ರಾಣ ಬೆದರಿಕೆ, ಕಿರುಕುಳ

ಇಸ್ಲಾಮಾಬಾದ್​: ರಮಜಾನ್ ಹಿನ್ನಲೆಯಲ್ಲಿ ಪಾಕಿಸ್ತಾನದಲ್ಲಿನ ಭಾರತದ ರಾಯಭಾರ ಕಚೇರಿ ಆಯೋಜಿಸಿದ್ದ ಇಫ್ತಾರ್​ ಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪಾಕ್​ನ ನೂರಾರು ಗಣ್ಯರಿಗೆ ಪ್ರಾಣ ಭೀತಿ ಒಡ್ಡಿದ್ದಲ್ಲದೆ, ನಾನಾ ಬಗೆಯ ಕಿರುಕುಳ ಕೊಟ್ಟು, ಅವಮಾನ ಮಾಡಿದ ಪಾಕ್​ ಸೇನಾ ಸಿಬ್ಬಂದಿ ಅವರೆಲ್ಲರನ್ನೂ ವಾಪಸು ಕಳುಹಿಸಿದ ಘಟನೆ ನಡೆದಿದೆ.

ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಇಸ್ಲಾಮಾಬಾದ್​ನ ಹೋಟೆಲ್​ ಸೆರೆನಾದಲ್ಲಿ ಇಫ್ತಾರ್​ ಕೂಟ ಆಯೋಜಿಸಿದ್ದರು. ಪಾಕಿಸ್ತಾನದ ಹಲವು ಗಣ್ಯ ವ್ಯಕ್ತಿಗಳು ಸೇರಿ ಸಹಸ್ರಾರು ಜನರನ್ನು ಕೂಟಕ್ಕೆ ಆಹ್ವಾನಿಸಿದ್ದರು. ಆಹ್ವಾನ ಮನ್ನಿಸಿ ದೊಡ್ಡ ಸಂಖ್ಯೆಯಲ್ಲಿ ಅತಿಥಿಗಳು ಆಗಮಿಸಿದ್ದರು.

ಆದರೆ, ಹೋಟೆಲ್​ ಅನ್ನು ಸುತ್ತುವರಿದ ಪಾಕ್​ ಸೇನಾಪಡೆ ಯೋಧರು ಇಫ್ತಾರ್​ ಕೂಟಕ್ಕೆ ಆಗಮಿಸುತ್ತಿದ್ದ ಅತಿಥಿಗಳಿಗೆ ಪ್ರಾಣಭೀತಿ ಒಡ್ಡಿದ್ದಲ್ಲದೆ, ಮಾನಸಿಕ ಕಿರುಕುಳ ನೀಡಿದ್ದಾರೆ. ಅವರೆಲ್ಲರನ್ನೂ ಅವಮಾನಿಸಿ ಕೂಟದಲ್ಲಿ ಪಾಲ್ಗೊಳ್ಳದೆ ಹಾಗೆಯೇ ಹಿಂದಿರುಗುವಂತೆ ಮಾಡಿದ್ದಾಗಿ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ದೂರಿದ್ದಾರೆ.

ಯೋಧರು ಅಕ್ಷರಶಃ ಹೋಟೆಲ್​ ಅನ್ನು ಸುತ್ತುವರಿದ್ದಿದ್ದರು. ನಂಬರ್​ ಮರೆಮಾಚಿದ ಮೊಬೈಲ್​ಫೋನ್​ನಿಂದ ಕರೆ ಮಾಡಿ, ಅತಿಥಿಗಳನ್ನು ಹೊರಕರೆದು ಅವಮಾನಿಸಿದ್ದಾಗಿ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ