ಮೈಸೂರು: ಸಿ.ಎಸ್. ಶಿವಳ್ಳಿ ನಿಧನದಿಂದ ತೆರವಾಗಿರುವ ಸಚಿವ ಸ್ಥಾನ ಭರ್ತಿ ಮಾಡಲಾಗುವುದೇ ಹೊರತು ಸಂಪುಟ ಪುನರಚನೆಯೂ ಇಲ್ಲ, ವಿಸ್ತರಣೆ ಯಾವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರವಾಗಿರುವ ಶಿವಳ್ಳಿ ಸ್ಥಾನ ಭರ್ತಿಗೆ ನಿರ್ಧರಿಸಲಾಗಿದೆ ಬೇರಾವ ಸಂಪುಟ ಪುನರಚನೆ, ಸಂಪುಟ ವಿಸ್ತರಣೆ ಬಗೆಗೆ ತೀರ್ಮಾನಿಸಿಲ್ಲ ಎಂದರು.
ಸಂಪುಟದ ಕೆಲ ಸಚಿವರಿಗೆ ಕೋಕ್ ನೀಡಿ, ರೆಬಲ್ ಶಾಸಕರಿಗೆ ಮಣೆಹಾಕಿ ಸಮ್ಮಿಶ್ರ ಸರ್ಕಾರ ಉಳಿಸಿಕೊಲ್ಳುವ ನಿಟ್ಟಿನಲ್ಲಿ ದೋಸ್ತಿ ನಾಯಕರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿತ್ತು. ಈ ಮೂಲಕ ಸಿಎಂ ಕುಮಾರಸ್ವಾಮಿ ಸಂಪುಟ ವಿಸ್ತರಣೆ ಮಾಡುವ ಮೂಲಕ ಅತೃಪ್ತರ ಬಾಯಿ ಮುಚ್ಚಿಸಲಿದ್ದಾರೆ ಎಂಬ ಚರ್ಚೆ ಆರಂಭವಾಗಿತ್ತು. ಆದರೆ ಸಿದ್ದರಾಮಯ್ಯನವರು ಅಂತಹಾ ಯೋಜನೆಗಳೇನೂ ಇಲ್ಲ, ಕಾಂಗ್ರೆಸ್ ನ ಒಂದು, ಜೆಡಿಎಸ್ ನ ಎರಡು ಸಚಿವ ಸ್ಥಾನ ಖಾಲಿ ಇದೆ. ನಾವು ಒಂದು ಸ್ಥಾನ ಭರ್ತಿ ಮಾಡಲಿದ್ದೇವೆ. ಆದರೆ ಜೆಡಿಎಸ್ ಬಗೆಗೆ ಗೊತ್ತಿಲ್ಲ ಎಂಡು ಹೇಳಿದ್ದಾರೆ.
ಇನ್ನು ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ರಮೇಶ್ ಎಲ್ಲಿಯೂ ಹೋಗಲ್ಲ, ಕಾಂಗ್ರೆಸ್ ನಲ್ಲೇ ಇರುತ್ತಾರೆ.
ಖಂಡಿತವಾಗಿಯೂ ರಾಜಿನಾಮೆ ನೀಡಲ್ಲ ಎಂದು ಸ್ಪಷ್ಟಪಿಸಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ರಾಜ್ಯ ಸರ್ಕಾರ ಬೀಳುತ್ತದೆ ಎಂದು ಒಂದು ವರ್ಷದಿಂದಲೂ ಹೇಳುತ್ತಲೇ ಇದ್ದಾರೆ. ಆದರೆ ಇದುವರೆಗೂ ನಿಜವಾಗಿಲ್ಲ. ಯಡಿಯೂರಪ್ಪ ಸುಮ್ಮನೆ ಹೇಳುತ್ತಲೇ ಇದ್ದಾರೆ. ಅದಾವುದೂ ನಿಜವಾಗಲ್ಲ. ಈಗ ಜೂ. 1ಕ್ಕೆ ಸರ್ಕಾರ ಬೀಳುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಜೂ. 1ರಂದು ಸರ್ಕಾರ ಬೀಳದೇ ಇದ್ದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೀತಾರಾ ಎಂದು ಪ್ರಶ್ನಿಸಿದರು.
Mysore,Siddaramaiah, Alliance Government