ಕೊಪ್ಪಳ: ಸೇನೆಯ ಕುರಿತ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶಕಾಯುವವರ ಬಗ್ಗೆ ಇಂಥಹ ಹೇಳಿಕೆ ನೀಡಲು ನಾಚಿಕೆಯಾಗುವುದಿಲ್ಲವೇ..?ಇದೆಂಥಹ ಯೋಚನೆ ಕುಮಾರಸ್ವಾಮಿಯವರೇ ಎಂದು ಪ್ರಶ್ನಿಸಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ಬಿಜೆಪಿ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಎರಡುಹೊತ್ತು ಊಟಕ್ಕೆ ಇಲ್ಲದವರು ಸೇನೆಗೆ ಸೇರುತ್ತಾರೆ ಎಂದು ಸಿಎಂ ಕುಮಾರಸ್ವಾಮಿಯವರು ಹೇಳುತ್ತಾರೆ. ಇದೆಂಥಹ ಯೋಚನೆ ಕುಮಾರಸ್ವಾಮಿಯವರೇ…? ಸೈನಿಕರ ಬಗ್ಗೆ ಇಂತಹ ಹೇಳಿಕೆ ನೀಡಲು ನಾಚಿಕೆಯಾಗುವುದಿಲ್ಲವೇ… ಗಡಿಯಲ್ಲಿ ಹೋರಾಟ ನಡೆಸುತ್ತಿರುವವರ ಬಗ್ಗೆ ಇಂಥಹ ಹೇಳಿಕೆ ಯಾಕೆ? ನಮ್ಮ ದೇಶಸೇವೆ ಮಾಡುವವರಿಗೆ ಅವಮಾನ ಮಾಡಲಾಗುತ್ತಿದೆ. ಬಡವರ ಬಗ್ಗೆ ನಿಮಗೆ ಗೌರವವಿಲ್ಲವೇ..? ಇದನ್ನು ಕೇಳಿಯೇ ನಮಗೆ ಕೋಪ ಹೆಚ್ಚುತ್ತಿದೆ. ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದೀರಿ. ಆದರೆ ನಿಮ್ಮ ಮನಸ್ಸಿನಲ್ಲಿದ್ದ ಮಾತನ್ನೇ ನೀವು ಹೇಳಿದ್ದೀರಿ.. ಇಂತಹ ಮಾತು ಹೇಳಿ ನೀವು ತಪ್ಪಿಸಿಕೊಳ್ಳಲಾಗಲ್ಲ. ಇದಕ್ಕೆ ನೀವು ಬೆಲೆ ತೆರಲೇಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದವರಿಂದ ಇಂತಹ ಹೇಳಿಕೆಗಳು ಬರುತ್ತವೆ. ಮಹಾಘಟಬಂಧನದ ಪಕ್ಷಗಳು ಸೇನೆಯ ಬಗ್ಗೆ ಹೀಗೆ ಅಪಮಾನ ಮಾಡುವ ಮಾತುಗಳನ್ನಾಡುತ್ತಿವೆ. ಇಂತವರಿಂದ ಏನನ್ನು ನಿರಿಕ್ಷಿಸಲು ಸಾಧ್ಯ ಎಂದರು.
ಸುಲ್ತಾನ್ ಉತ್ಸವಕ್ಕೆ ಇವರ ಬಳಿ ಹಣವಿರುತ್ತದೆ. ಆದರೆ ಹಂಪಿ ಉತ್ಸವಕ್ಕೆ ಇವರ ಬಳಿ ಹಣವಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ 10 ಪರ್ಸೆಂಟ್ ಸರ್ಕಾರವಾಗಿತ್ತು. ಈಗ 10 ಪರ್ಸೆಂಟ್ 20 ಪರ್ಸೆಂಟ್ ಆಗಿದೆ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಗುಡುಗಿದರು.
ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವರು ನಿವೃತ್ತಿ ಪಡೆದು ರಾಜಕೀಯ ಸನ್ಯಾಸತ್ವ ಪಡೆದರಾ…? ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲಮನ್ನಾ ಭರವಸೆ ನೀಡಿದ್ರು. ಆದರೆ ಸಿಎಂ ಸಾಲ ಮನ್ನಾ ಮಾಡಿದ್ರಾ…? ಕೃಷಿ ಸಮ್ಮಾನ್ ಯೋಜನೆಗೂ ಅಡ್ಡಗಾಲು ಹಾಕಲು ಮುಂದಾದರು. ರಾಜ್ಯದ ರೈತರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಲು ವಿಳಂಬ ಮಾಡಿ ಅಡ್ಡಗಾಲು ಹಾಕಲು ಯತ್ನಿಸಿದ್ದರು. ಇಂಥವರ ಮಾತುಗಳನ್ನು ನೀವು ನಂಬಿ ಮತನೀಡುತ್ತೀರಾ…? ಎಂದು ಪ್ರಶ್ನಿಸಿದರು.
PM narendra modi,koppala,gangavati