ಮಂಡ್ಯ: ಮಂಡ್ಯ ಚುನಾವಣೆ ನಿಸ್ಪಕ್ಷಪಾತವಾಗಿ ನಡೆಯುತ್ತಿಲ್ಲ. ಚುನಾವಣಾಧಿಕಾರಿಗಳು ಸಿಎಂ ಕುಮಾರಸ್ವಾಮಿ ಪರ ಕೆಲಸ ಮಾಡುತ್ತಿದ್ದಾರೆ. ಚುನಾವಣಾಧಿಕಾರಿ ಬದಲಾವಣೆ ಮಾಡಬೇಕು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಸುಮಲತಾ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗಳ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮಂಜುಶ್ರೀ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಪರ ಕೆಲಸ ಮಾಡುತ್ತಿದ್ದಾರೆ. ಮಂಜುಶ್ರೀಯವರೇ ಇಲ್ಲಿ ಚುನಾವಣಾಧಿಕಾರಿಯಾಗಿ ಮುಂದುವರೆದರೆ ನಮಗೆ ನ್ಯಾಯ ಸಿಗಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ನಿಖಿಲ್ ನಾಮಪತ್ರದಲ್ಲಿ ಗೋಲ್ ಮಾಲ್ ಆಗಿದೆ. ನಾವು ವಿಡಿಯೋ ಕೇಳಿದ್ರೆ ಕ್ಯಾಮರಾ ಮದುವೆಗೆ ಹೋಗಿದೆ ಎಂದು ಕಿರಿಕ್ ಮಾಡಿದ್ರು. ಆಮೇಲೆ ವಿಡಿಯೋ ಕೊಟ್ಟಾಗ ಅದರಲ್ಲಿ ಪ್ರಮುಖ ಭಾಗವೇ ಕಟ್ ಆಗಿದೆ. ನಮ್ಮ ಸಮಾವೇಶಕ್ಕೆ ಕರೆಂಟ್ ಕಟ್ ಆಗುತ್ತೆ. ಅವರ ಸಮಾವೇಶಕ್ಕೆ ಫುಲ್ ಕರೆಂಟ್ ಗೆ ಆದೇಶ ನೀಡಲಾಗುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದ 2,047 ಬೂತ್ಗಳ ಸಂಪೂರ್ಣ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಕೇವಲ ಒಂದು ವಿಡಿಯೋವನ್ನು ನೋಡಿಕೊಳ್ಳಲು ಆಗಲಿಲ್ಲ. ಈ ಮೂಲಕ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಗೆಲ್ಲಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರಾ ಎನ್ನುವ ಸಂದೇಹ ನನ್ನಲ್ಲಿ ಮೂಡುತ್ತಿದೆ.
ಮುಖ್ಯಮಂತ್ರಿಗಳು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಎಲೆಕ್ಷನ್ ನಡೆಸೋಕೆ ಇದ್ದಾರಾ ಅಥವಾ ಸಿಎಂ ಮಗನ ರಕ್ಷಣೆಗೆ ಇದ್ದಾರಾ..? ಡಿಸಿ ಕಚೇರಿಯನ್ನು ಸಿಎಂ ನಡೆಸುತ್ತಿದ್ದಾರಾ. ನೇರ ಫೈಟ್ ಮಾಡದೇ ಹೀಗೆಲ್ಲ ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ಕೆಲವು ಘಟನೆಗಳು ನಡೆದವು. ಈ ಕುರಿತು ನಾನು ಸಲ್ಲಿಸಿದ ಅನೇಕ ದೂರುಗಳಿಗೆ ಇಲ್ಲಿಯವರೆಗೂ ಸರಿಯಾದ ಮಾಹಿತಿಯೇ ಸಿಕ್ಕಿಲ್ಲ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರದ ದಿನವೇ ಖುದ್ದು ಮುಖ್ಯಮಂತ್ರಿಗಳೇ ನಿಖಿಲ್ ಕ್ರಮ ಸಂಖ್ಯೆಯನ್ನು ಘೋಷಣೆ ಮಾಡಿದ್ದಾರೆ. ನನಗೆ 20ನೇ ಕ್ರಮ ಸಂಖ್ಯೆ ನೀಡಿದ್ದಾರೆ. ನನ್ನ ಹಿಂದೆ ಮುಂದೆ ಸುಮಲತಾ ಹೆಸರಿನ ಅಭ್ಯರ್ಥಿಗಳನ್ನು ಹಾಕಲಾಗಿದೆ. ಮತದಾರರಲ್ಲಿ ಗೊಂದಲ ಉಂಟುಮಾಡಲು ಹೀಗೆ ಮಾಡಿದ್ದಾರೆ.
ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ. ಈ ಗೋಲ್ ಮಾಲ್ ಗೆ ನಮಗೆ ನ್ಯಾಯ ಸಿಗಬೇಕು.
ಮತದಾನ ಪ್ರಜಾಪ್ರಭುತ್ವದ ಪವಿತ್ರ ಕಾರ್ಯ. ಪ್ರಜಾಪ್ರಭುತ್ವ ರಕ್ಷಣೆಯಾಗಬೇಕು. ಮಂಡ್ಯದಲ್ಲಿ ನ್ಯಾಯಯುತ ಚುನಾವಣೆ ನಡೆಯಬೇಕೆಂದರೆ ಮೊದಲು ಚುನಾವಣಾಧಿಕಾರಿ ಬದಲಾಗಬೇಕು. ಈ ಬಗ್ಗೆ ಕಾನೂನು ಹೋರಾಟದ ಬಗ್ಗೆಯೂ ನಿರ್ಧರಿಸುವುದಾಗಿ ಸುಮಲತಾ ತಿಳಿಸಿದ್ದಾರೆ.
Summata ambareesh, mandya, election officer change