ರೈತರೊಂದಿಗೆ ಕೃಷಿ ಸಚಿವ ಬಿ.ಸಿ.ಪಾಟೇಲ್ ಸಂವಾದ | ಕೊಟ್ಟಿಗೆ ಗೊಬ್ಬರ ಬಳಸಿ ಬಹುಬೆಳೆಯಿಂದ ರೈತರ ಆದಾಯ ಪ್ರಗತಿ

ಮಂಡ್ಯ/ಕೆ.ಆರ್.ಪೇಟೆ : ಸಾವಯವ ಮತ್ತು ಸಮಗ್ರ ಕೃಷಿಯನ್ನು ರೈತರು ಅಳವಡಿಸಿಕೊಂಡಾಗ ಕೃಷಿಕರ ಆದಾಯ ದ್ವಿಗುಣವಾಗಲು, ರೈತರು ಸ್ವಾಭಿಮಾನಿಗಳಾಗಲು ಸಾಧ್ಯ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ರೈತರು ಬಹುಬೆಳೆ ಪದ್ಧತಿ ಅನುಸರಿಸುವ ಜೊತೆಗೆ ವಾಣಿಜ್ಯ ಬೆಳೆ ಬೆಳೆಯುವತ್ತ ಆಸಕ್ತಿ ವಹಿಸಬೇಕು. ಸಾಂಪ್ರದಾಯಿಕ ಬೆಳೆಗಳಾದ ಭತ್ತ, ಕಬ್ಬು, ರಾಗಿಯ ಜೊತೆಯಲ್ಲೇ ಲಾಭದಾಯಕ ಬೆಳೆ ಬೆಳೆಯುವುದರಿಂದ ರೈತರ ಆದಾಯವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ರಾಸಾಯನಿಕವನ್ನು ಹೆಚ್ಚು ಬಳಸಬೇಡಿ:
ಭೂಮಿಗೆ ಯಥೇಚ್ಛ ರಾಸಾಯನಿಕವನ್ನು ಹಾಕಿ ವಿಷಮಯ ಮಾಡಲಾಗಿದೆ. ರಸಗೊಬ್ಬರವನ್ನು ಬಿಟ್ಟು ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರವನ್ನು ಬಳಸುವುದರೊಂದಿಗೆ ಪೌಷ್ಠಿಕಾಂಶಯುಕ್ತ ಆಹಾರೋತ್ಪನ್ನಗಳನ್ನು ಉತ್ಪಾದಿಸುವಂತೆ ಸಲಹೆ ನೀಡಿದರು.
ಸಮಗ್ರ ಕೃಷಿಯಲ್ಲಿ ಹತ್ತು ಹಲವು ಬೆಳೆ ಬೆಳೆಯುವುದರಿಂದ ಒಂದು ಬೆಳೆಯಲ್ಲಿ ನಷ್ಟವಾದರೂ ಉಳಿದ ಬೆಳೆಯಿಂದ ಆದಾಯ ಪಡೆಯಬಹುದು. ಕೋಲಾರದಂತಹ ಬರಡು ಜಿಲ್ಲೆಯಲ್ಲಿ ಹತ್ತಾರು ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ. ಸಮೃದ್ಧ ನೀರಾವರಿ ಸಂಪತ್ತನ್ನು ಇಟ್ಟುಕೊಂಡಿರುವ ಮಂಡ್ಯಜಿಲ್ಲೆಯಲ್ಲಿ ಸಮಗ್ರ ಕೃಷಿ ಪದ್ಧತಿಗೆ ರೈತರು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಮಧ್ಯವರ್ತಿಗಳಿಂದ ರೈತರಿಗೆ ಅನ್ಯಾಯ:
ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಅನ್ಯಾಯವಾಗುತ್ತಿದೆ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಇದಕ್ಕೆ ರೈತರು, ಮಧ್ಯವರ್ತಿಯನ್ನು ಅವಲಂಬಿಸಿರುವುದೇ ಮುಖ್ಯ ಕಾರಣ. ಮಧ್ಯವರ್ತಿಗಳನ್ನು ದೂರವಿಟ್ಟು ನೀವೇ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವುದಕ್ಕೆ ಮುಂದಾಗಬೇಕು. ನೀವೇ ನಿಮ್ಮ ಬೆಳೆಗಳಿಗೆ ಬೆಲೆ ನಿಗದಿಪಡಿಸಬೇಕು. ಆಗ ನಿಮಗೆ ಉತ್ತಮ ಬೆಲೆ ದೊರಕೇ ದೊರಕುತ್ತದೆ. ಯಾರೂ ನಿಮಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ ಎಂದರು.
ಸಿರಿಧಾನ್ಯಕ್ಕೆ ಹೆಚ್ಚು ಬೇಡಿಕೆ:
ಸಿರಿಧಾನ್ಯಗಳಿಗೆ ಈಗ ಹೆಚ್ಚಿನ ಬೇಡಿಕೆ ಬಂದಿದೆ. ಮೊದಲು ಈ ಧಾನ್ಯಗಳು ಬಡವರ ಆಹಾರವಾಗಿತ್ತು. ಅಕ್ಕಿ ಎನ್ನುವುದು ಶ್ರೀಮಂತರ ಧಾನ್ಯವಾಗಿತ್ತು. ಈಗ ಸಿರಿಧಾನ್ಯಗಳು ಶ್ರೀಮಂತರ ಆಹಾರವಾಗುತ್ತಿದ್ದರೆ, ಅಕ್ಕಿ ಬಡವರ ಆಹಾರವಾಗುತ್ತಿದೆ. ಒಂದು ಎಕರೆ ಜಮೀನಿನಲ್ಲಿ ನಾನಾ ಮಾದರಿಯ ಸಿರಿಧಾನ್ಯವನ್ನು ಬೆಳೆಯಬಹುದು. ಆ ಧಾನ್ಯಗಳ ಬೆಲೆ ಪ್ರತಿ ಕೆಜಿಗೆ 90 ರೂ. ನಿಂದ 120 ರೂ.ವರೆಗೆ ಇದೆ. ಇಂತಹ ಧಾನ್ಯ ಬೆಳೆಯುವುದರಿಂದಲೂ ರೈತರು ಹೆಚ್ಚಿನ ಲಾಭ ಪಡೆಯಬಹುದು ಎಂದರು.
ವೈಜ್ಞಾನಿಕ ಪದ್ಧತಿ ಅನುಸರಿಸಿ:
ಕೃಷಿಯಲ್ಲಿ ತೊಡಗುವವರು ವೈಜ್ಞಾನಿಕವಾಗಿ ಆಲೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕೃಷಿಗೆ ಯಾವ ರೀತಿ ಮಾನಸಿಕವಾಗಿ ಸಜ್ಜುಗೊಳ್ಳಬೇಕು.
ಯಾವ ಬೆಳೆ ಬೆಳೆಯಬೇಕು, ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಹೇಗೆ ಕೃಷಿಯಲ್ಲಿ ಬೆಳವಣಿಗೆ ಕಾಣಬಹುದು. ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಆಡಳಿತದಲ್ಲಿರುವ ನಾವು ತಿಳಿಸಿಕೊಟ್ಟರೆ, ರೈತರಲ್ಲಿ ಧೈರ್ಯ ಮತ್ತು ಛಲವನ್ನು ತುಂಬಿದರೆ ಅದೇ ನಾವು ಅವರಿಗೆ ನೀಡುವ ದೊಡ್ಡ ಪ್ಯಾಕೇಜ್ ಎಂದು ಹೇಳಿದರು.
ಲಾಕ್‍ಡೌನ್ ವೇಳೆಯೂ ರೈತರಿಗೆ ನೆರವು:
ಲಾಕ್‍ಡೌನ್ ಸಮಯದಲ್ಲಿ ರೈತರನ್ನು ಕಟ್ಟಿಹಾಕಿದ್ದರೆ ಇಂದು ನಮಗೆ ತಿನ್ನಲು ಅನ್ನ ಸಿಗುತ್ತಿರಲಿಲ್ಲ. ಅಂದು ಮುಖ್ಯಮಂತ್ರಿಗಳು ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಕ್ರಮ ವಹಿಸುವಂತೆ ನಮಗೆ ಹಾಗೂ ಅಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಕೊರೋನಾ ಸಮಯದಲ್ಲೂ ರೈತರ ಕೃಷಿ ಕೆಲಸಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಿದ್ದೆವು ಎಂದರು.
ರೈತರ ಕಷ್ಟಗಳಿಗೆ ಸ್ಪಂದನೆ:
ಕೊರೋನಾ ಸುಧಾರಣೆಯಾಗುತ್ತಿರುವ ಸಮಯದಲ್ಲಿ ನಾವು ರೈತರ ಬಳಿ ಬಂದು ಅವರ ಕಷ್ಟಗಳನ್ನು ತಿಳಿಯುವ ಪ್ರಯತ್ನ ನಡೆಸಿದ್ದೇವೆ. ನಿಮಗೆ ನೋವು, ಕಷ್ಟಗಳು ಏಕೆ ಬಂದಿವೆ, ಅದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿದುಕೊಂಡು ತಜ್ಞರೊಂದಿಗೆ ಚರ್ಚಿಸಿ ಪರಿಹಾರ ದೊರಕಿಸಿಕೊಡುವ ಸಲುವಾಗಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾಕಾರಿ ಡಾ.ಎಂ.ವಿ.ವೆಂಕಟೇಶ್, ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಾಜೇಂದ್ರಕುಮಾರ್, ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್ ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ