ಗುಂಟೂರು: ಪಕ್ಷ ಬದಲಾವಣೆ, ನಂಬಿಕೆ ದ್ರೋಹ ಮಾಡುವುದರಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿಸ್ಸೀಮರು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಎನ್ಡಿಎ ಮೈತ್ರಿಕೂಟದಿಂದ ಹೊರಬಿದ್ದ ಬಳಿಕ ಇದೇ ಮೊದಲ ಬಾರಿಗೆ ಇಂದು ಆಂಧ್ರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು , ರಾಜ್ಯದ ಅಭಿವೃದ್ಧಿ ಮರೆತು ತಮ್ಮ ಕುಟುಂಬದ ಬಗ್ಗೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ, ಆಂಧ್ರಪ್ರದೇಶವನ್ನು ಬೆಳಗಿಸುತ್ತೇನೆ ಎಂದು ಭರವಸೆ ನೀಡಿ, ಈಗ ತಮ್ಮ ಮಗನನ್ನು ಬೆಳೆಸುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಯೂ-ಟರ್ನ್ ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಇತ್ತೀಚೆಗೆ ನಾಯ್ಡು ಅವರು, ತಾವು ಮೋದಿಯವರಿಗಿಂತ ದೊಡ್ಡವರು. ಆದರೂ ನಾನು ಅವರನ್ನು ಸರ್ ಎಂದು ಸಂಬೋಧಿಸುತ್ತೇನೆ. ಅವರ ಅಹಂಕಾರ ತೃಪ್ತಿಗಾಗಿ ಇದನ್ನು ಮಾಡುತ್ತೇನೆ ಎಂದಿದ್ದರು. ಈ ಹೇಳಿಕೆಗೆ ತಿರುಗೇತು ನೀಡಿದ ಮೋದಿ, ಹೌದು ಚಂದ್ರಬಾಬು ನಾಯ್ಡು ಅವರು ಹಿರಿಯರು. ಪಕ್ಷ ಬದಲಿಸುವಲ್ಲಿ, ಅವರ ಮಾವ ಎನ್.ಟಿ.ರಾಮರಾವ್ಗೆ ನಂಬಿಕೆ ದ್ರೋಹ ಮಾಡುವಲ್ಲಿ ಈಗಾಗಲೇ ಹಿರಿತನ ತೋರಿದ್ದಾರೆ. ಹಾಗೇ ತಮಗೆ ಬೇಕಾದಾಗ ಒಬ್ಬರನ್ನು ಹೊಗಳುವುದು, ಬೇಡವೆಂದ ಮರುಕ್ಷಣವೇ ಅವರನ್ನು ಕಡೆಗಣಿಸುವಲ್ಲಿ ಕೂಡ ಹಿರಿಯರು ಎಂದು ವ್ಯಂಗ್ಯವಾಡಿದರು.
ಚಂದ್ರಬಾಬು ನಾಯ್ಡು ಅವರು ಶ್ರೀಮಂತ ರಾಜಕಾರಣಿ. ಅಪ್ಪ-ಮಗನ ಸರ್ಕಾರಕ್ಕೆ ಕ್ಷಣಗಣನೆ ಶುರುವಾಗಿದ್ದು ಬರುವ ಚುನಾವಣೆಯಲ್ಲಿ ಸೋಲು ಖಚಿತ ಎಂದು ಹೇಳಿದರು.
ನರೇಂದ್ರ ಮೋದಿಯವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ಕೃಷ್ಣಪಟ್ಟಣಂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್(ಬಿಪಿಸಿಎಲ್)ಗೆ ಶಂಕುಸ್ಥಾಪನೆ ನೆರವೇರಿಸಿದರು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶಿಷ್ಟಾಚಾರಕ್ಕೂ ಮೋದಿಯವರನ್ನು ಸ್ವಾಗತಿಸಲು ಏರ್ಪೋರ್ಟ್ಗೆ ಹೋಗಲಿಲ್ಲ. ರಾಜ್ಯಪಾಲ ಇಸಿಎಲ್ ನರಸಿಂಹನ್ ಅವರು ವಿಜಯವಾಡದ ಏರ್ಪೋರ್ಟ್ಗೆ ತೆರಳಿ ಮೋದಿಯವರನ್ನು ಸ್ವಾಗತಿಸಿದರು.
ಪ್ರಧಾನಿ ಮೋದಿ ಆಂಧ್ರ ಭೇಟಿ ಕುರಿತು ಮಾತನಾಡಿದ್ದ ಚಂದ್ರಬಾಬು ನಾಯ್ಡು, ಒಂದೊಮ್ಮೆ ಮೋದಿಯವರು ನಮ್ಮ ರಾಜ್ಯಕ್ಕೆ ಆಗಮಿಸಿದರೆ ಅದು ಬ್ಲ್ಯಾಕ್ ಡೇ ಆಗಲಿದೆ. ನಮ್ಮ ರಾಜ್ಯದ ಮಣ್ಣು ಅಪವಿತ್ರಗೊಳ್ಳಲಿದೆ ಎಂದಿದ್ದರು.
Prime Minister Narendra Modi,Campaign,Andhra Pradesh,N Chandrababu Naidu