ನವದೆಹಲಿ: ರಫೆಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಮಾಧ್ಯಮ ವರದಿಯನ್ನು ತಳ್ಳಿಹಾಕಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಇದು ಸತ್ತ ಕುದುರೆಯನ್ನು ಬಡಿದೆಬ್ಬಿಸುವ ರೀತಿಯಂತಿದೆ ಎಂದು ವಾಗ್ದಾಲಿ ನದೆಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವೆ, ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಪ್ರಧಾನಿ ಮೋದಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಮಾಧ್ಯಮದ ವರದಿ ಕುರಿತು ಪ್ರತಿಕ್ರಿಯಿಸಿ, ಈ ವರದಿಯಲ್ಲಿ ಯಾವುದೇ ಹುರುಳಿಲ್ಲ. ವಿಪಕ್ಷಗಳು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಪಾಶ್ಚಾತ್ಯ ಹಿತಾಸಕ್ತಿಗಳ ಕೈಗೊಂಬೆಯಾಗಿವೆ ಎಂದು ಆರೋಪಿಸಿದರು.
ಪ್ರತಿಪಕ್ಷಗಳು ಸತ್ತ ಕುದುರೆಯನ್ನು ಬಡಿದೆಬ್ಬಿಸುತ್ತಿದೆ. ರಫೆಲ್ ಯುದ್ಧ ವಿಮಾನ ಒಪ್ಪಂದದ ಕುರಿತು ನಿಯಮಿತವಾಗಿ ಕಾಲಕಾಲಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯ ವಿಚಾರಿಸುತ್ತಿದ್ದರೆ ಅದನ್ನು ಒಪ್ಪಂದದಲ್ಲಿ ಮೂಗುತೂರಿಸುವಿಕೆ ಎಂದು ಹೇಳಲು ಸಾಧ್ಯವಿಲ್ಲ ಎಂದರು. ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಪಾಶ್ಚಾತ್ಯ ಹಿತಾಸಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ವಿರೋಧ ಪಕ್ಷಗಳು ಭಾರತೀಯ ವಾಯುಪಡೆಯ ಹಿತಾಸಕ್ತಿಗೆ ಅಡ್ಡಿಯುಂಟುಮಾಡುತ್ತಿವೆ ಎಂದು ಕಿಡಿಕಾರಿದರು.
ರಫೆಲ್ ಒಪ್ಪಂದದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದ ಮಧ್ಯಪ್ರವೇಶಕ್ಕೆ ಮತ್ತು ಫ್ರಾನ್ಸ್ ಕಂಪೆನಿಗಳೊಂದಿಗೆ ಅಕ್ರಮವಾಗಿ ಬೆಲೆ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂದು ಅಂದಿನ ರಕ್ಷಣಾ ಕಾರ್ಯದರ್ಶಿಗಳು ಆರೋಪಿಸಿದ್ದರು ಎಂದು ಪತ್ರಿಕೆಯಲ್ಲಿ ಬಂದ ವರದಿ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಒಪ್ಪಂದ ಸರಿದಾರಿಯಲ್ಲಿಯೇ ಸಾಗುತ್ತಿದ್ದು ಅಧಿಕಾರಿಗಳು ತಾಳ್ಮೆಯಿಂದಿರುವಂತೆ ಅಂದಿನ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದರು ಎಂದರು.
Rafale jet deal,Defence Minister Nirmala Sitharaman,dismissed, media report, flogging a dead horse