10 ಯೋಜನೆಗಳಿಗೆ ರಕ್ಷಣಾ ಇಲಾಖೆ ಜಾಗ ನಿಡಲು ಅನುಮತಿ

ಬೆಂಗಳೂರು:ಆ-4:ವಿವಿಧ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಭೂಮಿ ವರ್ಗಾವಣೆ ಸಂಬಂಧ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅನುಮತಿ ನೀಡಿದ್ದಾರೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಿರ್ಮಲಾ ಸೀತಾರಾಮನ್ ಅವರೊಂದಿಗೆ ರಕ್ಷಣಾ ಇಲಾಖೆಯ ಭೂಮಿಯನ್ನು ವರ್ಗಾಯಿಸುವ ಕುರಿತು ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಸಚಿವೆ ನಿರ್ಮಲಾ ಅವರು 10 ಯೋಜನೆಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡಲು ಅನುಮತಿ ನೀಡಿದ್ದಾರೆ.

ಈ ವೇಳೆ ಜಂಟಿ‌ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವೆ, ದೆಹಲಿಗೆ ಬಂದಿದ್ದಾಗ ಸಿಎಂ ಈ ಬಗ್ಗೆ ಸಮಾಲೋಚಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಜತೆ ನಮ್ಮ ರಕ್ಷಣಾ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದರು. ಇಂದು ನಡೆದ ಸಭೆಯಲ್ಲಿ ಬೆಂಗಳೂರಿನಲ್ಲಿ ಕೈಗೊಂಡಿರುವ 10 ಯೋಜನೆಗಳಿಗೆ ಭೂ ವರ್ಗಾವಣೆ ಮಾಡಲು ಸೂಚಿಸಿದ್ದೇನೆ. ಯಾವುದೇ ವಿಳಂಬವಾಗದಂತೆ ರಕ್ಷಣಾ ಅಧಿಕಾರಿಗಳು‌ ಅನುಮತಿ‌ ನೀಡಬೇಕು ಎಂದು ಸ್ಪಷ್ಟಪಡಿಸಿದರು.

ನಾವು ನೀಡಿದ ಭೂಮಿಗೆ ಪರ್ಯಾಯವಾಗಿ ರಕ್ಷಣಾ ಇಲಾಖೆಗೆ ರಾಜ್ಯ ಸರ್ಕಾರ ಸಮಾನ ಮೌಲ್ಯದ ಭೂಮಿಯನ್ನು ನೀಡಲು ಒಪ್ಪಿಕೊಂಡಿದೆ. ರಕ್ಷಣಾ ಇಲಾಖೆಯ ನಿಯಮಾವಳಿ ಅನ್ವಯ ಭೂಮಿ ವರ್ಗಾವಣೆ ಮಾಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧರ ಕೈಗೊಂಡು ಭೂಮಿಯನ್ನು ರಕ್ಷಣಾ ಇಲಾಖೆಗೆ ವರ್ಗಾವಣೆ ಮಾಡಲಾಗುವುದು ಎಂದು ವಿವರಿಸಿದರು.

ಒಟ್ಟು 45,165 ಚದರ ಮೀಟರ್ ರಕ್ಷಣಾ ಇಲಾಖೆಯ ಸುಮಾರು 282 ಕೋಟಿ‌ ರೂ. ಮೌಲ್ಯದ ಭೂಮಿಯನ್ನು ಬಿಬಿಎಂಪಿಗೆ ವರ್ಗಾಯಿಸಲು ಅನುಮತಿ‌ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಸಮಮೌಲ್ಯದ ಭೂಮಿಯನ್ನು ರಕ್ಷಣಾ ಇಲಾಖೆ ಬೇಡಿಕೆ ಇಟ್ಟ ಕಡೆ ಮಂಜೂರು ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಜಮೀನು ಮಂಜೂರು ಪ್ರಕ್ರಿಯೆಗೆ ಕಾಯದೆ ಕೂಡಲೇ ಕಾಮಗಾರಿ ನಡೆಸಲು ರಕ್ಷಣಾ ಇಲಾಖೆ ಅಧಿಕಾರಿಗಳು ಅನುಮತಿ‌ ನೀಡಲು ಸೂಚಿಸಲಾಗಿದೆ.

ಮೆಟ್ರೋ ನಿಲ್ದಾಣಗಳ ಅಭಿವೃದ್ಧಿಗೆ, ಮೆಟ್ರೋ ಜಾಲ ವಿಸ್ತಿರಿಸಲು ರಕ್ಷಣಾ ಇಲಾಖೆಯ ಅಗತ್ಯವಿದ್ದಷ್ಟು ಭೂಮಿ ಬಿಟ್ಟು ಕೊಡುವಂತೆ ಮನವಿ ಮಾಡಿದ್ದರು. ರೈಲ್ವೆ ಮೇಲ್ಸೇತುವೆ (ಆರ್‌ಒಬಿ), ಸರ್ವಿಸ್‌ ರಸ್ತೆ, ಪಾದಚಾರಿ ಮಾರ್ಗ, ಮೆಟ್ರೋ ಎರಡನೇ ಹಂತದ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳಿಗೆ ನಗರದಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ಸುಮಾರು 16 ಎಕರೆ ಭೂಮಿಯ ಅವಶ್ಯಕತೆ ಇತ್ತು. ಆ ಭೂಮಿಯನ್ನು ಹಸ್ತಾಂತರಿಸಿ, ಬದಲಿ ಭೂಮಿಯನ್ನು ಪಡೆಯಲು ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರವು ಸಚಿವರಿಗೆ ಮನವಿ ಸಲ್ಲಿಸಿದೆ.

H D Kumaraswamy,Defence Minister Nirmala Sitharaman,meeting

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ