ವಿಧಾನಸಭೆಯ ನಡಾವಳಿಕೆಗಳು ನನಗೆ ಅತ್ಯಂತ ನೋವು ತಂದಿದೆ: ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಫೆ.8- ಗುರುಮಿಟ್ಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ್ ಅವರ ಪುತ್ರ ಶರಣಗೌಡರನ್ನು ವಿಧಾನಸಭೆ ಪ್ರತಿಪಕ್ಷದ ನಾಯಕರ ಪರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಆಮಿಷವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವಂತೆ ಪ್ರಚೋದನೆ ನೀಡಿರುವುದಲ್ಲದೆ ತಮ್ಮ ಸ್ಥಾನಮಾನದ ಬಗ್ಗೆ ಹಗುರವಾಗಿ ಮಾತನಾಡಿರುತ್ತಾರೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಅವರಿಗೆ ದೂರು ನೀಡಿದ್ದಾರೆ.

ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ವಿಶಿಷ್ಟ ಪರಂಪರೆ ಇದೆ. ಈ ಸಭೆಯ ಸಭಾಧ್ಯಕ್ಷರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ವಿಧಾನಸಭೆಯ ನಡಾವಳಿಕೆಗಳು ನನಗೆ ಅತ್ಯಂತ ನೋವು ತಂದಿದೆ.

ರಾಜ್ಯಪಾಲರು ವಿಧಾನಮಂಡಲದ ಉಭಯ ಸದನವನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ನಡೆದುಕೊಂಡ ರೀತಿ ಸದನದ ಪರಂಪರೆಗೆ ಕಪ್ಪುಚುಕ್ಕೆ ಎಂಬುದೇ ನನ್ನ ಭಾವನೆ. ತಮ್ಮ ಆದೇಶಗಳನ್ನು ಧಿಕ್ಕರಿಸಿ ಸದನದಲ್ಲಿ ಅವರು ನಡೆದುಕೊಂಡ ರೀತಿ ಕರ್ನಾಟಕ ವಿಧಾನಸಭೆ ಪಾವಿತ್ರ್ಯತೆಗೆ ಭಂಗ ತಂದಂತಾಗಿದೆ.

ನಿನ್ನೆ ಫೆ.7ರಂದು ನಡೆದಿರುವ ವಿದ್ಯಮಾನ ಅತ್ಯಂತ ವಿಷಾದನೀಯವಾಗಿದೆ. ನಮ್ಮ ಪಕ್ಷದ ಗುರುಮಿಟ್ಕಲ್ ಕ್ಷೇತ್ರದ ಶಾಸಕರಾದ ನಾಗನಗೌಡ ಕಂದಕೂರ್ ಅವರ ಪುತ್ರ ಶರಣಗೌಡ ಅವರನ್ನು ಪ್ರತಿಪಕ್ಷದ ನಾಯಕರ ಪರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ದೇವದುರ್ಗದಲ್ಲಿರುವ ಸರ್ಕಾರಿ ಅತಿಥಿ ಗೃಹಕ್ಕೆ ಆಹ್ವಾನಿಸಿ ಪ್ರತಿಪಕ್ಷದ ನಾಯಕರು ಕಂದಕೂರ್ ಅವರಿಂದ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸುವಂತೆ ಪ್ರಚೋದನೆ ಮಾಡಿದ್ದಾರೆ.

ರಾಜೀನಾಮೆಗೆ ಪೂರಕವಾದ ಆಮಿಷಗಳನ್ನು ಒಡ್ಡಿದ್ದಾರೆ. ಈ ಸಂದರ್ಭದಲ್ಲಿ ಅವರ ಜತೆಯಲ್ಲಿದ್ದ ದೇವದುರ್ಗದ ಶಾಸಕ ಶಿವನಗೌಡ ನಾಯಕ್ ಅತ್ಯಂತ ಆಕ್ಷೇಪಾರ್ಹ ಮಾತುಗಳನ್ನು ಬಳಸಿದ್ದು ತಮ್ಮ ಸ್ಥಾನಮಾನದ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾರೆ. ಹಾಸನದ ಶಾಸಕರಾದ ಪ್ರೀತಮ್‍ಗೌಡ ಹಾಜರಿರುತ್ತಾರೆ. ಅವರ ಈ ಮಾತುಗಳು ನನಗೆ ವೈಯಕ್ತಿಕವಾಗಿ ನೋವುಂಟುಮಾಡಿವೆ. ರಾಜ್ಯ ವಿಧಾನಸಭೆ ಸದಸ್ಯರೊಬ್ಬರು ಸಭಾಧ್ಯಕ್ಷರ ಬಗ್ಗೆ ಈ ರೀತಿ ಮಾತನಾಡಿದ್ದಾರೆ ಎಂಬುದು ಊಹೆಗೆ ನಿಲುಕದ್ದು.ಅವರು ಮಾತನಾಡಿರುವ ಧ್ವನಿಸುರುಳಿಯನ್ನು ತಮ್ಮ ಗಮನಕ್ಕೆ ಕಳುಹಿಸಿದ್ದೇನೆ. ಧ್ವನಿ ಸುರುಳಿಯನ್ನು ಆಲಿಸಿ ವಿಧಾನಸಭೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ