ನವದೆಹಲಿ: ಪರೀಕ್ಷೆ ಜೀವನಕ್ಕಿಂತ ದೊಡ್ಡದೇನಲ್ಲ. ಪರೀಕ್ಷೆಯೇ ಎಲ್ಲವನ್ನೂ ನಿರ್ಧರಿಸುವುದೂ ಇಲ್ಲ. ಪರೀಕ್ಷೆಯಿಂದ ಜ್ಞಾನವೃದ್ಧಿಯೇ ಹೊರತು ಪರೀಕ್ಷೆಯೇ ಬದುಕಲ್ಲ. ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಾಲ್ಕಟೋರ ಮೈದಾನದಲ್ಲಿ ನಡೆದ 2ನೇ ಆವೃತ್ತಿಯ ‘ಪರೀಕ್ಷಾ ಪೇ ಚರ್ಚಾ’ ಸಂವಾದದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರು. ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಪರೀಕ್ಷೆಗಳು ಇರುವ ಹಿನಲೆಯಲ್ಲಿ ಈ ವಿಶೇಷ ಸಂವಾದ ಆಯೋಜಿಸಲಾಗಿತ್ತು.
ಬೋರ್ಡ್ ಪರೀಕ್ಷೆಗಳೇ ವಿದ್ಯಾರ್ಥಿಗಳ ಜೀವನದಲ್ಲಿ ಸವಾಲುಗಳಲ್ಲ. ಪೋಷಕರು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಪರೀಕ್ಷೆಯ ಹೊರತಾಗಿಯೂ ಅದ್ಭುತ ಬದುಕಿದೆ ಎಂಬುದನ್ನು ಅವರಿಗೆ ತಿಳಿಸಿಕೊಡಬೇಕು ಎಂದು ಹೇಳಿದರು.
ಪರೀಕ್ಷೆ ಜೀವನಕ್ಕಿಂತ ದೊಡ್ಡದೇನಲ್ಲ. ಪರೀಕ್ಷೆಯೇ ಎಲ್ಲವನ್ನೂ ನಿರ್ಧರಿಸುವುದಿಲ್ಲ. ನಮ್ಮ ಜೀವನ ದೊಡ್ಡ ಸವಾಲುಗಳಿಂದ ತುಂಬಿರಬೇಕು. ಸವಾಲು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಮಕ್ಕಳ ಮೂಲಕ ಪೊಷಕರು ನಿರೀಕ್ಷೆ ಹೊಂದುವುದು ತಪ್ಪಲ್ಲ. ಆದರೆ ಅತಿಯಾದ ನಿರೀಕ್ಷೆ ತಪ್ಪು. ನಿಮ್ಮ ಮಕ್ಕಳ ಅಂಕಗಳ ಬಗ್ಗೆ ಚರ್ಚೆ ಮಾಡುವುದು ಬೇಡ. ಬೇರೆ ಮಕ್ಕಳೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಸಲೂ ಹೋಗಬೇಡಿ. ನಿಮ್ಮ ಮಕ್ಕಳ ಅಂಕಪಟ್ಟಿಯನ್ನು ವಿಸಿಟಿಂಗ್ ಕಾರ್ಡ್ ರೀತಿ ನೋಡಬೇಡಿ. ಮಕ್ಕಳನ್ನು ಸ್ನೇಹಿತರಂತೆ ಕಾಣುವ ಮನೋಭಾವ ರೂಢಿಸಿಕೊಳ್ಳಿ. ಬದುಕು ಪರೀಕ್ಷೆಯನ್ನೂ ಮೀರಿದ್ದು ಎಂಬುದನ್ನು ತಿಳಿಸಿಹೇಳಿ ಎಂದು ಪೊಷಕರಿಗೆ ಸಲಹೆ ನೀಡಿದರು.
ಈಗ ನಾವೆಲ್ಲ ಕೇವಲ ರ್ಯಾಂಕಿಂಗ್ ಹಿಂದೆ ಬೆನ್ನು ಹತ್ತಿದ್ದೇವೆ. ಈಗಿನ ಶಿಕ್ಷಕರು ಕೇವಲ ಸಿಲಬಸ್ ಹೇಳಿಕೊಡುತ್ತಾರೆ ಹೊರತು ಅದು ಜೀವನಕ್ಕೆ ಹೇಗೆ ಉಪಯೋಗವಾಗುತ್ತೆ ಎಂಬುದನ್ನು ಹೇಳಿಕೊಡಲ್ಲ. ಹಾಗಾಗಬಾರದು. ಶಿಕ್ಷಕ, ವಿದ್ಯಾರ್ಥಿ ಮತ್ತು ಆಡಳಿತ ಈ ಮೂವರು ಒಂದಾಗಬೇಕು. ಶಿಕ್ಷಣವನ್ನು ಜೀವನದಿಂದ ತೆಗೆದು ಹಾಕಿ ಕೇವಲ ಪರೀಕ್ಷೆಗೆ ಸಿಮೀತ ಮಾಡಬಾರದು. ಶಿಕ್ಷಕರು ಶಿಸ್ತು ಹಾಗೂ ಬದ್ಧತೆಯನ್ನು ಕಲಿಸಿಕೊಡುವುದರ ಜತೆಗೆ ಜೀವನಪಾಠವನ್ನು ಕಲಿಸಿಕೊಡಬೇಕು.್ ಎಂದರು.
ಇದೇ ವೇಳೆ ಮಾನಸಿಕ ಒತ್ತಡದಿಂದ ಹೊರಬಹುವುದನ್ನು ತಿಳಿಸಿದ ಪ್ರಧಾನಿ ಮೋದಿ, ಮನಸ್ಸಿನಲ್ಲಿ ಅನಿಸಿದ್ದನ್ನು ಕಾಗದದಲ್ಲಿ ಬರೆಯಿರಿ. ನಂತರ ಅದನ್ನು ಹರಿದು ಹಾಕಿ. ಹೀಗೆ ಮೂರರಿಂದ ನಾಲ್ಕುಸಲ ಮಾಡಿ. ಅದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತೆ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಮಕ್ಕಳು ಯಾವ ವಯಸ್ಸಿನಲ್ಲಿರುತ್ತಾರೆ ಆ ವಯಸ್ಸಿನಲ್ಲಿ ನಿಮಗೆ ಏನು ಅನಿಸುತ್ತಿತ್ತು ಎಂಬುದರ ಬಗ್ಗೆ ಪೋಷಕರು ಯೋಚನೆ ಮಾಡಿ, ಆ ಬಗ್ಗೆ ತಿಳಿದು ನಿಮ್ಮ ಮಕ್ಕಳ ಮೇಲೆ ಅನ್ವಯಿಸಿ, ಹೀಗೆ ಮಾಡುವುದರಿಂದ ಮಕ್ಕಳು ಮತ್ತು ನಿಮ್ಮ ನಡುವಿನ ಬಾಂಧವ್ಯ ಹೆಚ್ಚುತ್ತದೆ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
Pariksha Pe Charcha 2.0,PM Modi