ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಸುಗ್ರೀವಾಜ್ಞೆ ಜಾರಿ ಇಲ್ಲ: ಪ್ರಧಾನಿ ಮೋದಿ

ನವದೆಹಲಿ: ರಾಮಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ಞೆ ತರುವ ವಿಚಾರ ಇಲ್ಲ. ರಾಮ ಮಂದಿರ ಕುರಿತು ಯಾವುದೇ ಕ್ರಮ ಕೈಗೊಳ್ಳುವುದಾದರೂ ಅದು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ವಿಚಾರವಾಗಿ ಇದೇ ಮೊದಲಬಾರಿಗೆ ಮೌನ ಮುರಿದಿರುವ ಪ್ರಧಾನಿ ಮೋದಿ, ಎ ಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಕುರಿತ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಹಾಗಾಗಿ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಸುಗ್ರೀವಾಜ್ನೆ ಜಾರಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಮಮಂದಿರ ನಿರ್ಮಾಣಕ್ಕಾಗಿ ನಾವು ಎಲ್ಲ ಪ್ರಯತ್ನಗಳನ್ನೂ ಮಾಡಲು ಸಿದ್ಧ. ಅಯೋಧ್ಯಾ ರಾಮಮಂದಿರಕ್ಕೆ ಸಂಬಂಧಪಟ್ಟಂತೆ ಸಂವಿಧಾನದ ಪರಿಮಿತಿಯೊಳಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಈ ಹಿಂದೆಯೇ ನಾವು ತಿಳಿಸಿದ್ದೇವೆ ಎಂದು ಹೇಳಿದರು.

ಇನ್ನು ಮಂದಿರ ನಿರ್ಮಾಣ ಕುರಿತ ವಿಚಾರಣೆ ಸುಪ್ರೀಂ ನಲ್ಲಿ ವಿಳಂಬವಾಗಲು ಕಾಂಗ್ರೆಸ್ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಅಡ್ಡಿಯುಂಟುಮಾಡುತ್ತಿರುವುದೇ ಕಾರಣ ಎಂದಿದ್ದಾರೆ.

ಒಮ್ಮೆ ನ್ಯಾಯಾಂಗದ ಪ್ರಕ್ರಿಯೆ ಮುಗಿದ ನಂತರ ಸರ್ಕಾರದ ಭಾಗವಾಗಿ ನಾವು ನಮ್ಮ ಪ್ರಯತ್ನ ಮಾಡುತ್ತೇವೆ. ರಾಮಮಂದಿರ ನಿರ್ಮಾಣಕ್ಕಾಗಿ ನಾವು ನಮ್ಮೆಲ್ಲಾ ರೀತಿಯ ಪ್ರಯತ್ನಕ್ಕೆ ಸಿದ್ದ ಎಂದರು.

ಜನವರಿ 4ರಿಂದ ಸುಪ್ರೀಂ ಕೋರ್ಟ್ ನಲ್ಲಿ ರಾಮ ಮಂದಿರ ವಿವಾದ ವಿಚಾರಣೆಗೆ ಬರಲಿದ್ದು ಪ್ರತಿದಿನದ ನಿರಂತರ ವಿಚಾರಣೆಗಾಗಿ ಇದಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಮನವಿಯನ್ನು ಸಲ್ಲಿಸಲಾಗಿದೆ.

ತ್ರಿವಳಿ ತಲಾಕ್ ಕುರಿತ ಸುಗ್ರೀವಾಜ್ಞೆ ತಂದದ್ದು ಸಹ ತ್ರಿವಳಿ ತಲಾಕ್ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿತ್ತ ಬಳಿಕವೇ ಆಗಿದ್ದು ಸರ್ಕಾರವು ನ್ಯಾಯಾಂಗದ ತೀರ್ಪನ್ನು ಎಂದಿಗೂ ಗೌರವಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.

2017ರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಉಲ್ಲೇಖಿಸಿದ ಮೋದಿ ಸುಪ್ರೀಂ ಕೋರ್ಟ್ ಮುಸ್ಲಿಮರ ತ್ರಿವಳಿ ತಲಾಖ್ ಆಚರಣೆಯನ್ನು ನಿಷೇಧಿಸಿತ್ತು, ಆ ಬಳಿಕವೇ ಸರ್ಕಾರ ಈ ಕುರಿತಂತೆ ಕ್ರಮಕ್ಕೆ ಮುಂದಾಗಿತ್ತು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್​ ಮುಖಂಡರ ಬಳಿ ಒಂದು ಮನವಿ ಮಾಡಿಕೊಳ್ಳುತ್ತೇನೆ ಎಂದ ಪ್ರಧಾನಿ ಮೋದಿ, ಅಯೋಧ್ಯಾ ರಾಮಮಂದಿರ ವಿಷಯವನ್ನು ರಾಜಕೀಯವಾಗಿ ತೂಕ ಹಾಕಬೇಡಿ. ಇದು ದೇಶದ ಶಾಂತಿ, ಅನ್ಯೋನ್ಯತೆಯ ವಿಷಯ ಎಂದು ಹೇಳಿದ್ದಾರೆ.

ನ್ಯಾಯಾಲಯಕ್ಕೆ ಅದರ ತೀರ್ಮಾನಕ್ಕೆ ಬರಲು ಅವಕಾಶ ನೀಡಿ ಕಾಂಗ್ರೆಸ್ ಪರ ವಕೀಲರು ತಮ್ಮ ವಾದವನ್ನು ನಿಲ್ಲಿಸಬೇಕು. ಇದಲ್ಲದೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳೂ ಒಟ್ಟಾಗಿ ನ್ಯಾಯಾಲಯದಲ್ಲಿ ವಾದಿಸುವುದಕ್ಕೆ ವಕೀಲರನ್ನು ನೇಮಕ ಮಾಡಬೇಕು. ಆ ಪ್ರಕಾರವಾಗಿ ನ್ಯಾಯಾಲಯಕ್ಕೆ ಇದು ಅತಿ ಶೀಘ್ರವಾಗಿ ಬಗೆಹರಿಯಬೇಕಾದ ವಿಚಾರ ಎನ್ನುವುದನ್ನು ಮನದಟ್ಟು ಮಾಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

PM Modi, Ordinance on Ram Mandir Only After SC Ruling

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ