ಹೈದರಾಬಾದ್: ಬಹುನಿರೀಕ್ಷಿತ ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ, ಟಿಆರ್ ಎಸ್ ಮತ್ತು ಬಿಜೆಪಿ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ.
ಒಂದೇ ಹಂತದಲ್ಲಿ ನಡೆಯುವ ಮತದಾನದಲ್ಲಿ ಸುಮಾರು 2.80 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 32,815 ಮತಗಟ್ಟೆಗಳನ್ನು ತೆರೆಯಲಾಗಿದೆ. ಒಂದೂವರೆ ಲಕ್ಷಕ್ಕೂ ಅಧಿಕ ಸಿಬ್ಬಂದಿ ಮತದಾನ ಪ್ರಕ್ರಿಯೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ, ಕೆಟಿ ರಾಮ ರಾವ್, ಹರೀಶ್ ರಾವ್, ಕಾಂಗ್ರೆಸ್ ನಿಂದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ, ರೇವಂತ್ ರೆಡ್ಡಿ ಕಣದಲ್ಲಿದ್ದಾರೆ.
ಟಾಲಿವುಡ್ ನ ಖ್ಯಾತ ನಟ ಅಲ್ಲು ಅರ್ಜುನ್ ಹೈದರಾಬಾದ್ ನ ಜ್ಯುಬಿಲಿ ಹಿಲ್ಸ್ ನಲ್ಲಿರುವ ಬೂತ್ ಸಂಖ್ಯೆ 152ಕ್ಕೆ ಆಗಮಿಸಿ ಮತ ಚಲಾಯಿಸಿದರು. ಇನ್ನೊಂದೆಡೆ ನಟ ಅಕ್ಕಿನೇನಿ ನಾಗಾರ್ಜುನ ಮತ್ತು ಅವರ ಪತ್ನಿ ನಟಿ ಅಮಲಾ ಅಕ್ಕಿನೇನಿ ಜ್ಯುಬಿಲಿ ಹಿಲ್ಸ್ ನ ಮತಗಟ್ಟೆ ಸಂಖ್ಯೆ 151ಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
Telangana Assembly Elections,Voting