ಬಾಬ್ರಿ ಮಸೀದಿ ಧ್ವಂಸಕ್ಕೆ 26 ವರ್ಷ; ಅಯೋಧ್ಯೆಯಲ್ಲಿ ಬಿಗಿ ಭದ್ರತೆ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಇಂದಿಗೆ 26 ವರ್ಷ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಇಂದು ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ವಿಶ್ವ ಹಿಂದು ಪರಿಷತ್​, ಬಜರಂಗದಳ ಸೇರಿ ಅನೇಕ ಹಿಂದು ಸಂಘಟನೆಗಳು ಈ ದಿನವನ್ನು ‘ಶೌರ್ಯದ ದಿನ’ ಹಾಗೂ ‘ವಿಜಯದ ದಿನ’ ಎಂದು ಆಚರಣೆ ಮಾಡುತ್ತಿವೆ. ಇನ್ನು, ಮುಸ್ಲಿಂ ಸಂಘಟನೆಗಳು ಈ ದಿನವನ್ನು ‘ಕಪ್ಪು ದಿನ’ ಎಂದು ಘೋಷಿಸಿವೆ.

ವಿವಾದಿತ ಸ್ಥಳ ಸೇರಿದಂತೆ ಅಯೋಧ್ಯೆಯಲ್ಲಿ ಬರೋಬ್ಬರಿ 2,500 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ‘ಅಯೋಧ್ಯೆ ಹಾಗೂ ಫೈಜಾಬಾದ್​ನಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ. ವಿವಾದಿತ ಸ್ಥಳದಲ್ಲಿ ಕಾಣಿಸಿಕೊಂಡ ನಾಲ್ವರು ಹಿಂದು ಕಾರ್ಯಕರ್ತರನ್ನು ಬುಧವಾರ ಬಂಧಿಸಲಾಗಿದೆ. ಸಿಆರ್​ಪಿಎಫ್​ ಹಾಗೂ ಆರ್​ಎಎಫ್​ ತುಕಡಿಗಳನ್ನು ನಗರದಲ್ಲಿ ನಿಯೋಜನೆ ಮಾಡಲಾಗಿದೆ’ ಎಂದು ಫೈಜಾಬಾದ್​​ ಎಸ್​ಪಿ ಅನಿಲ್​ ಸಿಂಗ್​ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇನ್ನು, ವಿಶ್ವ ಹಿಂದು ಪರಿಷತ್​ ಅಯೋಧ್ಯೆಯಲ್ಲಿ ಇಂದು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬಾಬ್ರಿ ಮಸೀದಿ ಧ್ವಂಸ ಮಾಡಿದ ದಿನವನ್ನು ದೀಪಾವಳಿ ಹಬ್ಬದಂತೆ ಆಚರಿಸಬೇಕು ಎನ್ನುವ ಉದ್ದೇಶ ಹಿಂದು ಸಂಘಟನೆಗಳದ್ದು.

ಏನಿದು ಘಟನೆ?:
ಮೊಘಲರ ಕಾಲದಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕಟ್ಟಲಾಗಿತ್ತು. ರಾಮ ಮಂದಿರವನ್ನು ಕೆಡವಿ ಬಾಬ್ರಿ ಮಸೀದಿ ಕಟ್ಟಲಾಗಿದೆ ಎಂದು ಹಿಂದುಗಳು ಆರೋಪಿಸಿದ್ದರು. 1984ರಲ್ಲಿ ವಿಶ್ವ ಹಿಂದು ಪರಿಷತ್ ಈ ವಿಚಾರದಲ್ಲಿ ಸಾರ್ವಜನಿಕರ ಬೆಂಬಲ ತೆಗೆದುಕೊಳ್ಳಲು ಆಂದೋಲನ ಆರಂಭಿಸಿತ್ತು. ನಂತರ ಈ ವಿಚಾರ ಕೋರ್ಟ್​​ ಮೆಟ್ಟಿಲೇರಿತು. 1992ರಲ್ಲಿ ಅನೇಕ ಹಿಂದು ಕಾರ್ಯಕರ್ತರು ಬಾಬ್ರಿ ಮಸೀದಿಯನ್ನು ಕೆಡವಿದರು. ಇದರಿಂದ ದೇಶಾದ್ಯಂತ ಸಾಕಷ್ಟು ಹಿಂಸಾಚಾರಗಳು ನಡೆದವು. ಸದ್ಯ ಸುಪ್ರೀಂಕೋರ್ಟ್​ ವಿವಾದಿತ ಸ್ಥಳದ ಬಗ್ಗೆ ವಿಚಾರಣೆ ನಡೆಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ