ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆ ಕಾವು ಜೋರಾಗಿದ್ದು, ಕೊಡಂಗಲ್ನಲ್ಲಿ ಇಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮ ಆರಂಭವಾಗುವ ಮುನ್ನ ಕೊಡಂಗಲ್ ಶಾಸಕ ರೇವಂತ್ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರೇವಂತ್ ರೆಡ್ಡಿ ಅವರ ಮನೆ ಸುತ್ತುವರಿದ ಪೊಲೀಸರು ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ್ದಾರೆ. ರೇವಂತ್ ಅವರನ್ನು ಬಂಧಿಸಲು ಇರುವ ಆದೇಶ ಮತ್ತು ಐಡಿ ಕಾರ್ಡ್ ಗಳನ್ನು ತೋರಿಸಿ ಎಂದು ಶಾಸಕರ ಆಪ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆ ಕೂಡ ನಡೆಯಿತು.
ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಕೊಡಂಗಲ್ನಲ್ಲಿ ಚುನಾವಣಾ ರ್ಯಾಲಿ ನಡೆಸುವಾಗ ಅದನ್ನು ಬಹಿಷ್ಕರಿಸುವಂತೆ ಅಲ್ಲಿನ ಜನರಿಗೆ ರೇವಂತ್ ಒತ್ತಾಯಿಸಿದ್ದರು. ಹಾಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡು ರೇವಂತ್ ಅವರನ್ನು ಬಂಧಿಸುವಂತೆ ಚುನಾವಣಾ ಆಯೋಗ ಆದೇಶಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೊಡಂಗಲ್ ರೇವಂತ್ ಅವರ ಕ್ಷೇತ್ರವಾಗಿದ್ದು, ಅವರ ಬಂಧನ ಪ್ರಸ್ತುತ ಕ್ಷೇತ್ರದಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಮುಂಜಾಗೃತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಬಂಧನದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ರೇವಂತ್ ರೆಡ್ಡಿ ಅವರ ಪತ್ನಿ ಗೀತಾ, ಇದು ಕೊಡಂಗಲ್ ಜನತೆಯ ಮೇಲೆ ನಡೆದ ದಾಳಿ. ಮಂಗಳವಾರ ಮುಂಜಾನೆ 3 ಗಂಟೆ ಹೊತ್ತಿಗೆ ಪೊಲೀಸರು ನಮ್ಮ ಕೋಣೆಗೆ ನುಗ್ಗಿದ್ದಾರೆ. ಐದು ನಿಮಿಷದೊಳಗೆ ಸುಮಾರು 40 ಪೊಲೀಸರು ಬಂದು ಉಗ್ರನನ್ನು ಬಂಧಿಸುವಂತೆ ನನ್ನ ಗಂಡನನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.
ಬಂಧನದ ವೇಳೆ ಪೊಲೀಸರು ತಮ್ಮ ಐಡಿ ಕಾರ್ಡ್ ತೋರಿಸಿಲ್ಲ ಎಂದು ಗೀತಾ ಆರೋಪಿಸಿದ್ದಾರೆ. ಅವರು ಕಾರ್ಯಪಡೆಯವರೋ, ಗುಪ್ತಚರ ಅಥವಾ ರಾಜ್ಯ ಪೊಲೀಸರೋ ಎಂಬುದು ನಮಗೆ ಗೊತ್ತಿಲ್ಲ. ನಮಗೆ ಹಿರಿಯ ಅಧಿಕಾರಿಗಳಿಂದ ಆದೇಶ ಲಭಿಸಿದೆ ಎಂದು ಪೊಲೀಸರೊಬ್ಬರು ಹೇಳಿದ್ದಾರೆ. ಇದು ಕೊಡಂಗಲ್ ಮೇಲೆ ನಡೆದ ದಾಳಿ. ನಾವು ಯಾವತ್ತೂ ಹಿಂಸಾಚಾರ ಮಾಡುವುದಿಲ್ಲ. ತೆಲಂಗಾಣದ ಪುತ್ರ ರೇವಂತ್ ರೆಡ್ಡಿಗೆ ಮತ ನೀಡುವ ಮೂಲಕ ನಾವು ಅವರಿಗೆ ಗೌರವ ಸಲ್ಲಿಸೋಣ ಎಂದು ಗೀತಾ ಮನವಿ ಮಾಡಿದ್ದಾರೆ.
ವಾರದ ಹಿಂದೆಯಷ್ಟೇ ಟಿಆರ್ಎಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ ಅವರು ತೆಲಂಗಾಣ ಮುಖ್ಯ ಚುನಾವಣಾ ಅಧಿಕಾರಿ ರಜತ್ ಕುಮಾರ್ ಅವರನ್ನು ಭೇಟಿ ಮಾಡಿ ರೇವಂತ್ ರೆಡ್ಡಿ ಅವರು ನಮ್ಮ ಪಕ್ಷದ ಅಧ್ಯಕ್ಷರ ಚುನಾವಣಾ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದರು. ಟಿಆರ್ಎಸ್ ಪಕ್ಷ ಮುಖ್ಯ ಚುನಾವಣಾ ಅಧಿಕಾರಿಯವರಿಗೆ ಸಲ್ಲಿಸಿದ ಪತ್ರದಲ್ಲಿ, ಡಿಸೆಂಬರ್ 4, ಅಪರಾಹ್ನ 3 ಗಂಟೆಗೆ ಕೆಸಿಆರ್ ಕೊಡಂಗಲ ಕ್ಷೇತ್ರದ ಕೋಸ್ಗಿಯಲ್ಲಿ ಟಿಆರ್ಎಸ್ ಅಭ್ಯರ್ಥಿ ಪ್ರಥಮ್ ನರೇಂದರ್ ರೆಡ್ಡಿ ಅವರಿಗೆ ಬೆಂಬಲ ಕೋರಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಏತನ್ಮಧ್ಯೆ, ಕೊಡಂಗಲ್ ವಿಧಾನಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಮತ್ತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರೀ ಅಧ್ಯಕ್ಷ ಎ. ರೇವಂತ್ ರೆಡ್ಡಿ ಕೊಡಂಗಲ್ನಲ್ಲಿ ಬಂದ್ಗೆ ಕರೆ ನೀಡುವ ಮೂಲಕ ಜನರನ್ನು ಪ್ರಚೋದಿಸಿದ್ದಾರೆ. ತಮ್ಮ ಪಕ್ಷದ ಅಧ್ಯಕ್ಷರ ಚುನಾವಣಾ ಕಾರ್ಯಕ್ರಮಕ್ಕೆ ಧಕ್ಕೆ ತರುವುದಾಗಿ ಅವರು ಬೆದರಿಕೆ ಒಡ್ಡಿದ್ದಾರೆ ಎಂದು ಬರೆಯಲಾಗಿದೆ. ಈ ಪತ್ರವನ್ನು ಪರಿಗಣಿಸಿದ ಚುನಾವಣಾ ಆಯೋಗ, ಕೊಡಂಗಲ್ ವಿಧಾನಸಭಾಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿ ಎಂದು ಡಿಜಿಪಿ ಅವರಿಗೆ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ರೇವಂತ ರೆಡ್ಡಿಯವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
telangana,KCR Rally, kodangal,MLA Revanth Reddy,