ತೆಲಂಗಾಣದ ನಿಜಾಮಾಬಾದ್ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ

ಹೈದರಾಬಾದ್: ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶಾದ್ಯಂತ ಇವಿಎಂ ಬಳಕೆಗೆ ಸಜ್ಜಾಗಿದ್ದರೆ ತೆಲಂಗಾಣದ ನಿಜಾಮಾಬಾದ್‍ನಲ್ಲಿ ಮಾತ್ರ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ನಲ್ಲಿ ಸ್ಪರ್ಧೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಸ್ಪರ್ಧಿಸುತ್ತಿರುವ ನಿಜಾಮಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 185 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ 170 ಮಂದಿ ರೈತರೇ ಇದ್ದಾರೆ. ಹೀಗಾಗಿ, ಇವಿಎಂನಲ್ಲಿ ಚುನಾವಣೆ ನಡೆಸುವುದು ಅಸಾಧ್ಯ ಎಂದು ಆಯೋಗ ಹೇಳಿದೆ.

ತೆಲಂಗಾಣ ರಾಜ್ಯದಲ್ಲಿ ಒಟ್ಟು 545 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ನಿಜಾಮಾಬಾದ್‍ನಲ್ಲಿ ಮಾತ್ರ 185 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪರಿಣಾಮ ಇವಿಎಂ ಯಂತ್ರದಲ್ಲಿ ನೋಟಾ ಸೇರಿದಂತೆ 64 ಅಭ್ಯರ್ಥಿಗಳಿಗೆ ಮಾತ್ರ ಸ್ಥಾನ ಕಲ್ಪಿಸಲು ಅವಕಾಶ ಇದೆ. ಪರಿಣಾಮ ಚುನಾವಣಾ ಆಯೋಗ ಬ್ಯಾಲೆಟ್ ಪೇಪರಿನಲ್ಲೇ ಸ್ಪರ್ಧೆ ನಡೆಸಲು ಸಿದ್ಧತೆ ನಡೆಸಿದೆ.

ಜೋಳ ಹಾಗೂ ಅರಿಶಿನ ಬೆಲೆಗೆ ಕನಿಷ್ಠ ಬೆಂಬಲ ಬೆಲೆ, ಅರಿಶಿನ ಮಂಡಳಿ ರಚಿಸುವುದರಲ್ಲಿ ತೆಲಂಗಾಣ ಪಾರ್ಟಿ (ಟಿಆರ್‍ಎಸ್) ವಿಫಲವಾಗಿದೆ ಎಂದು ಪ್ರತಿಭಟನಾರ್ಥ 170 ರೈತರು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Telangana, Nizamabad, Ballot papers

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ