ಇಸ್ಲಾಮಾಬಾದ್: ಭಾರತೀಯ ಸೇನೆ ಹಿಂದೂಮಹಾಸಾಗರದಲ್ಲಿ ಐಎನ್ಎಸ್ ಅರಿಹಂತ್ ಅನ್ನು ನಿಯೋಜನೆ ಮಾಡಿರುವ ಬೆನ್ನಲ್ಲೇ ಆತಂಕಕ್ಕೀಡಾಗಿರುವ ಪಾಕಿಸ್ತಾನ ಭಾರತದ ನಡೆ ದಕ್ಷಿಣ ಏಷ್ಯಾವನ್ನೇ ಬೆದರಿಸುವ ಕ್ರಮವಾಗಿದೆ ಎಂದು ವಿಶ್ವಸಮುದಾಯದ ಮೊರೆಹೋಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರ ಮಹಮದ್ ಫೈಸಲ್ ಅವರು, ‘ದಕ್ಷಿಣ ಏಷ್ಯಾ ಸಮುದ್ರದಲ್ಲಿ ಭಾರತ ತನ್ನ ಜಲಾಂತರ್ಗಾಮಿ ನೌಕೆಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಿದೆ. ಇದು ತನ್ನ ನೆರೆ ಹೊರೆಯ ದೇಶಗಳನ್ನು ಬೆದರಿಸುವ ತಂತ್ರಗಾರಿಕೆಯಾಗಿದ್ದು, ಕೇವಲ ಹಿಂದೂ ಮಹಾಸಾಗರ ಮಾತ್ರವಲ್ಲ ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಿರುವ ಇತರೆ ದೇಶಗಳಿಗೂ ಆತಂಕ ಉಂಟು ಮಾಡಿದೆ. ಈ ಬಗ್ಗೆ ವಿಶ್ವ ಸಮುದಾಯ ಗನಮ ಹರಿಸಬೇಕಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಭಾರತ ನೌಕದಳಕ್ಕೆ ಅಣ್ವಸ್ತ್ರ ಸಾಮರ್ಥ್ಯದ ಐಎನ್ಎಸ್ ಅರಿಹಂತ್ ಅನ್ನು ಸೇರ್ಪಡೆ ಮಾಡಿಕೊಂಡಿತ್ತು. ಅಲ್ಲದೆ ನೌಕೆ ತನ್ನ ಮೊದಲ ವಿಚಕ್ಷಣ ಕಾರ್ಯವನ್ನೂ ಕೂಡ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಈ ಹಿನ್ನಲೆಯಲ್ಲಿ ಪಾಕಿಸ್ತಾನದ ಆತಂಕ ಹೆಚ್ಚಿದೆ ಎನ್ನಲಾಗಿದೆ.