ನ.23ರಿಂದ ಮೂರು ದಿನ ಯುವಜನೋತ್ಸವ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ತುಮಕೂರು: ರಾಜ್ಯಮಟ್ಟದ ಯುವಜನೋತ್ಸವವನ್ನು ನವೆಂಬರ್23,24 ಹಾಗೂ 25 ರಂದು ನಗರದ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.‌

ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದರು.

ನ. 24 ರಂದು ಉತ್ಸವದ ಉದ್ಘಾಟನೆ ನಡೆಯಲಿದ್ದು, ಇನ್ನೆರಡು ದಿನ ಕಲಾ ಪ್ರದರ್ಶನ ಪ್ರಸ್ತುತ ಪಡೆಸಬೇಕು. ಉದ್ಘಾಟನೆಗೆ ಮುಖ್ಯಮಂತ್ರಿ ಅಥವಾ ರಾಜ್ಯಪಾಲರನ್ನು ಆಹ್ವಾನಿಸಲು ಸಭೆಯಲ್ಲಿ ಚರ್ಚಿಸಿದರು.

ರಾಜ್ಯಮಟ್ಟದ ಯುವಜನೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕಿದೆ. ಕಳೆದ ಬಾರಿ ನಡೆದ ಉತ್ಸವದಲ್ಲಿ ದೇಶದ ಎಲ್ಲ ಪ್ರಕಾರದ ಕಲಾವಿದರನ್ನು ಕರೆಸಿ ಪ್ರದರ್ಶನ ಕೊಡಿಸಲಾಗಿತ್ತು. ಅಂತೆಯೇ ಈ ಬಾರಿಯೂ ದೇಶದ ಎಲ್ಲ ಪ್ರಕಾರದ ಕಲೆಗಳ ಪ್ರದರ್ಶನ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೇಶಾದ್ಯಂತ ಒಟ್ಟು 1700 ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಲು ಆಗಮಿಸಲಿದ್ದಾರೆ. ಇವರಿಗೆ ಊಟ, ವಸತಿ, ಸಾರಿಗೆ ಸೇರಿದಂತೆ ಸಕಲ ವ್ಯವಸ್ಥೆ ಮಾಡಬೇಕು.ಇಡೀ ತುಮಕೂರನ್ನು ಹಬ್ಬದ ವಾತಾವರಣದಂತೆ ಸಿಂಗರಿಸಿ ಇಡೀ ರಾಜ್ಯದ ಗಮನ ಸೆಳೆಯುವ ರೀತಿ ನಡೆಸಬೇಕು ಎಂದರು.

ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗ ಬಾರದು. ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆ‌ ಸಮರ್ಪಕವಾಗಿರಬೇಕು ಎಂದು ನಿರ್ದೇಶನ ನೀಡಿದರು.

ಉತ್ತಮ ಕಲಾವಿದರನ್ನು ಕರೆಸಿ, ಪ್ರದರ್ಶನ ನೀಡಬೇಕು. ಯಾವ ಕಲಾ ಪ್ರದರ್ಶನವೂ ಕಳಪೆಯಾಗಿರಕೂಡದು. ಉತ್ಸವಕ್ಕೆ 25 ಲಕ್ಷ ರು. ಅನುದಾನ ಮಂಜೂರಾಗಿದೆ. ಹಣಕಾಸಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಸಂಸದ ಮುದ್ದಹನುಮೇಗೌಡ, ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಇದ್ದರು.

Tumkur,Yuvajanotsava,Dcm G Parameshwar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ