ಮಂತ್ರಾಲಯದಲ್ಲಿ ಆರ್ ಎಸ್ ಎಸ್ ರಾಷ್ಟ್ರೀಯ ಭೈಟಕ್ ಸಿದ್ದತೆ

ರಾಯಚೂರು: 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಕೇಂದ್ರ ಸರಕಾರದಲ್ಲಿ ಅಧಿಪತ್ಯವನ್ನ ಸ್ಥಾಪಿಸಲು ಯಶ್ವಸಿಯಾಗಿತ್ತು.

ಇದಕ್ಕೆ ಎನ್​ಡಿಎ ಮೈತ್ರಿ ಪಕ್ಷಗಳು ಹಾಗೂ ಆರ್​ಎಸ್ಎಸ್(ರಾಷ್ಟ್ರೀಯ ಸ್ವಯಂಸೇವಕ ಸಂಘ) ಕೊಡುಗೆ ಸಹ ಇದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಸಕ್ತ ವರ್ಷದಲ್ಲಿ ನಡೆಯುವ ಆರ್​ಎಸ್​ಎಸ್ ರಾಷ್ಟ್ರ ಮಟ್ಟದ ಸಭೆ ತೀರ್ಮಾನ ಬಹಳ ಮಹತ್ವ ಪಡೆದಿದ್ದು, ಬೈಠಕ್​ಗಾಗಿ ಬಿಸಿಲ ಊರಿನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಅವಧಿ ಇನ್ನು ಒಂದು ವರ್ಷ ಬಾಕಿಯಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಭಾರೀ ತಯಾರಿ ನಡೆಸುತ್ತಿದೆ. ಬಿಜೆಪಿಯ ಒಂದು ಭಾಗ ಎಂದು ಹೇಳಲಾಗುವ ಆರ್​ಎಸ್​ಎಸ್ ಸಹ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನ ನಡೆಸುತ್ತಿದೆ ಎನ್ನಲಾಗುತ್ತಿದೆ. ಪ್ರತಿ ವರ್ಷ ನಡೆಸುವ ಸಂಘ ಪರಿವಾರದ ಬೈಠಕ್ ಪ್ರಸಕ್ತ ಸಾಲಿನಲ್ಲಿ ಬಹಳ ಮಹತ್ವ ಪಡೆಯಲಿದ್ದು, ಇದಕ್ಕಾಗಿ ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಭರದ ಸಿದ್ಧತೆ ನಡೆದಿದೆ.

ಕರ್ನಾಟಕ ಪ್ರಾಂತ ಪ್ರಚಾರಕಾಗಿರುವ ಸುಧೀಂದ್ರ ಜೀ ಹಾಗೂ ವಿಭಾಗೀಯ ಪ್ರಚಾರಕಾಗಿರುವ ನರೇಂದ್ರ ಜೀ ಸೇರಿದಂತೆ 30 ಜನರ ತಂಡ ಮಂತ್ರಾಲಯಕ್ಕೆ ಆಗಮಿಸಿ ಶ್ರೀ ಸುಜಯೀಂದ್ರ ವಿಶ್ರಾಂತಿ ಭವನದಲ್ಲಿ ಬಿಡು ಬಿಟ್ಟು, ರಾಷ್ಟ್ರೀಯ ಮಟ್ಟದ ಸಭೆ ಯಶ್ವಸಿಯಾಗಿಸಲು ಎಲ್ಲಾ ರೀತಿಯ ನೀಲಿ ನಕ್ಷೆಯನ್ನ ರೂಪಿಸುತ್ತಿದೆ. ಶ್ರೀರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿನ ಟಿಟಿಡಿಯ ವಸತಿ ನಿಲಯದ ಕಲ್ಯಾಣ ಮಠದಲ್ಲಿ ನಡೆಸಲು ತಿರ್ಮಾನಿಸಿದ್ದು, ಸಭೆಗೆ ಬರುವವರಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಆರ್ ಎಸ್ ಎಸ್ ನ 42 ವಿವಿಧ ವಿಭಾಗಗಳೊಂಡ ರಾಷ್ಟ್ರ ಮಟ್ಟದ ಸಭೆಯಿದಾಗಿದ್ದು, ಆರ್​ಎಸ್​ಎಸ್​ನ ರಾಷ್ಟ್ರೀಯ ಅಧ್ಯಕ್ಷ ಮೋಹನ್ ಭಾಗವತ್ ಹಾಗೂ ಸಂಘ ಪರಿವಾರದ ಪ್ರಮುಖರ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ 7 ಜನ ಪ್ರಮುಖರು ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಮೋಹನ್​ ಭಾಗವತ್ ಮೂರು ದಿನಗಳ ಕಾಲ ಹಾಗೂ ಅಮಿತ್ ಶಾ ಎರಡು ದಿನಗಳ ಕಾಲ ಭಾಗಿಯಾಗಲಿದ್ದಾರೆ. ಜೊತೆಗೆ ದೇಶದ ನಾನಾ ಮೂಲೆಗಳಿಂದ ಸಂಘ ಪರಿವಾರದ ಸುಮಾರು 250ಕ್ಕೂ ಹೆಚ್ಚು ಪ್ರಮುಖರು ಸಭೆಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಪ್ರತಿ ವರ್ಷ ಆರ್​ಎಸ್​ಎಸ್ ರಾಷ್ಟ ಮಟ್ಟದ ಸಭೆ ಮಾಡಿ ಸಂಘ ಪರಿವಾರದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಆದರೆ ಈ ಬಾರಿ ಸಭೆಯು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಕುರಿತು ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದ್ದೆ.

ಒಟ್ಟಿನಲ್ಲಿ, ಆರ್​ಎಸ್​ಎಸ್ ರಾಷ್ಟ್ರ ಮಟ್ಟದ ಸಭೆಯ ಪೂರ್ವ ಸಿದ್ಧತೆ ಜೋರಾಗಿ ನಡೆಯುತ್ತಿದ್ದು, ಮುಂಬರುವ ಲೋಕಸಭೆ ಚುನಾವಣೆ ಸಂಘ ಪರಿವಾರದ ತೀರ್ಮಾನಕ್ಕೆ ಇಡೀ ರಾಷ್ಟ್ರ ತುಂಗಾ ತೀರದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿ ಮಠದತ್ತ ದೃಷ್ಟಿ ನೇಟಿದ್ದು, ಏನು ನಿರ್ಣಯ ಕೈಗೊಳ್ಳಲಾಗುತ್ತದೆ ಎಂಬುವುದು ಸದ್ಯ ಕುತೂಹಲ ಕೆರಳಿಸಿದೆ.

RSS baithak,Mantralayam,Raichur

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ