ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ; ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ತಟ್ಟಿದ ಪ್ರವಾಹ ಭೀತಿ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇದರಿಂದ ಕರ್ನಾಟಕಕ್ಕೂ ಅಪಾಯ ಉಂಟಾಗುವ ಸಾಧ್ಯತೆಯಿದೆನೆರೆಯ ಮಹಾರಾಷ್ಟ್ರಕ್ಕೆ ತಾಗಿಕೊಂಡಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಪ್ರವಾಹದ ಭೀತಿ ಎದುರಾಗಿದೆ

ಇಂದು ಸತಾರಾ ಜಿಲ್ಲೆಯ ಪಾಟಣ ತಾಲೂಕಿನ ಕೊಯ್ನಾ ಜಲಾಶಯದಿಂದ ನೀರು ಬಿಡಲಾಗಿದೆ. ಇಂದು ಹೆಚ್ಚುವರಿ 10,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುವುದು  ಎಂದು ಮಹಾರಾಷ್ಟ್ರ ನೀರಾವರಿ ಅಧಿಕಾರಿಗಳು ಕರ್ನಾಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕೊಯ್ನಾ ಡ್ಯಾಂ ಶೇ.80 ರಷ್ಟು ಭರ್ತಿಯಾಗಿದೆ. 2.20 ಲಕ್ಷ ಕ್ಯೂಸೆಕ್ ನೀರು ಕೃಷ್ಣೆಯ ಒಳ ಹರಿವು ಇದ್ದು, ಕೊಯ್ನಾ ಜಲಾಶಯದಿಂದ ನೀರು ಬಿಟ್ಟರೆ ಪ್ರವಾಹ ಉಂಟಾಗಲಿದೆ. ಇದರಿಂದ ಬೆಳಗಾವಿಯ 37 ಗ್ರಾಮಗಳಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಅಲ್ಲದೆ, ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಬಳ್ಳಾರಿಯ ಕೆಲವು ಭಾಗಗಳಲ್ಲಿ ಕೃಷ್ಣಾ ನದಿಯ ನೆರೆ ನೀರು ಜಮೀನುಗಳಿಗೆ ನುಗ್ಗಿ ಭಾರೀ ಹಾನಿಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ  ಜಮೀನುಗಳು ಜಲಾವೃತವಾಗಿವೆ. ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಬಾಗಲಕೋಟೆಯಲ್ಲಿ ಜಮೀನು ನಾಶ:
ಬಾಗಲಕೋಟೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ದೇಗುಲದ ಸುತ್ತಲೂ ನೀರು ಆವರಿಸಿರುವುದರಿಂದ ಭಕ್ತರು ಪರದಾಡುವಂತಾಗಿದೆ. ನಾರಾಯಣಪುರ ಡ್ಯಾಂಗೆ ನೀರು ಬಿಟ್ಟ ಪರಿಣಾಮ ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ತೊಗರಿ, ಸಜ್ಜೆ, ಕಬ್ಬು ಬೆಳೆ ನಾಶವಾಗಿದೆ.

ಬೆಳಗಾವಿಯಲ್ಲಿ ಪ್ರವಾಹ ಭೀತಿ:
ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಳ್ಳಿಗಳು ಜಲಾವೃತವಾಗಿವೆ. ಇಂಗಳಿ, ಯಡೂರವಾಡಿ, ಡೋಣಿ, ಗ್ರಾಮಗಳು ದ್ವೀಪದಂತಾಗಿವೆ.  ಕುಡಚಿ, ರಾಯಭಾಗ-ಚಿಂಚಲಿ, ಮಲಿಕವಾಡ-ದತ್ತವಾಡ, ಸದಲಗಾ-ಬೋರಗಾವ ಸೇರಿ ಒಟ್ಟು 9 ಸೇತುವೆಗಳು ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಜಮಖಂಡಿ-ಮೀರಜ ನಡುವಿನ ರಾಜ್ಯ ಹೆದ್ದಾರಿ ಕೂಡ ಬಂದ್ ಆಗಿದೆ. ಮುಲ್ಲಾನಕಿ ಸನದಿ ತೋಟ ರಾಯಬಾಗ ತಾಲೂಕಿನ ಚಿಂಚಲಿ ಶಿರಗೂರ ಗ್ರಾಮದ ತೋಟದ ವಸತಿಗಳಿಗೆ  ನೀರು ನುಗ್ಗಿರುವುದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ.

ಚಿಕ್ಕೋಡಿಯಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿರುವುದರಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಶಾಸಕರು ಮತ್ತು ಅಧಿಕಾರಿಗಳು ಮನವೊಲಿಸುತ್ತಿದ್ದಾರೆ. ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದು. ತೋಟದ ವಸತಿ ಬಿಟ್ಟು ಗ್ರಾಮಗಳಿಗೆ ತೆರಳುವಂತೆ ಆಗ್ರಹಿಸಿದ್ದಾರೆ. ಅಧಿಕಾರಿಗಳು ಶಾಸಕರ ಒತ್ತಾಯಕ್ಕೆ ಮಣಿದು ತೋಟದ ವಸತಿ ಖಾಲಿ ಮಾಡಿ ಯಡೂರವಾಡಿ ಗ್ರಾಮಸ್ಥರು ಸುರಕ್ಷಿತ ಸ್ಥಳಗಳತ್ತ ಧಾವಿಸುತ್ತಿದ್ದಾರೆ. ಇಂದಿನಿಂದ ಅಗತ್ಯ ಬಿದ್ದರೆ ಗಂಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಪ್ರವಾಹ ಎದುರಿಸಲು ಜಮಖಂಡಿ ಸಜ್ಜು:
ಜಮಖಂಡಿ ತಾಲೂಕಿನ ಕೃಷ್ಣಾನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹ ಭೀತಿ ಹಿನ್ನೆಲೆ ಪ್ರವಾಹವನ್ನು ಎದುರಿಸಲು ತಾಲೂಕಾಡಳಿತ ಸಜ್ಜಾಗಿದೆ ಎಂದು ಜಮಖಂಡಿಯಲ್ಲಿ ಶಾಸಕ ಆನಂದ್ ನ್ಯಾಮಗೌಡ ಹೇಳಿಕೆ ನೀಡಿದ್ದಾರೆ. 21 ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಪ್ರವಾಹ ಭೀತಿ ಎದುರಿಸ್ತಿರೋ ಗ್ರಾಮಸ್ಥರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು 13 ಬೋಟ್ ವ್ಯವಸ್ಥೆ, ಅಗತ್ಯವಿರುವೆಡೆ ಗಂಜಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಜಲಾವೃತಗೊಂಡಿರುವ ಮುತ್ತೂರು ಗ್ರಾಮದ 7 ಕುಟುಂಬಸ್ಥರನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುವುದು. ಪ್ರತಿ ದಿನ ಕೋಯ್ನಾ ಜಲಾಶಯದಿಂದ ಎಷ್ಟೆಷ್ಟು ನೀರು ಬಿಡ್ತಾರೆ ಅನ್ನೋದ್ರ ಬಗ್ಗೆ ನಿಗಾ ವಹಿಸಲಾಗಿದೆ.

08353-220023 ಸಹಾಯವಾಣಿ ಮೂಲಕ ಕುಂದುಕೊರತೆ ನಿವಾರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ