ನವದೆಹಲಿ:ಆ-10: ಪುತ್ರಿ ಆರುಷಿ ಮತ್ತು ಹೇಮ್ರಾಜ್ ಜೋಡಿ ಕೊಲೆ ಪ್ರಕರಣದಲ್ಲಿ ದಂತವೈದ್ಯ ದಂಪತಿ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.
ಹತ್ಯೆ ಪ್ರಕರಣದಲ್ಲಿ ತಲ್ವಾರ್ ದಂಪತಿ ನಿರ್ದೋಷಿಗಳು ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ. ಸಿಬಿಐ ಸಲ್ಲಿಸಿರುವ ಮೇಲ್ಮನವಿಯ ಜೊತೆಗೆ ಮೃತ ಹೇಮರಾಜ್ ಪತ್ನಿ ಕಮಲಾ ಬಂಜದೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಾಡುವುದಾಗಿಯೂ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ಸುಪ್ರೀಂ ಪೀಠ ತಿಳಿಸಿದೆ. ಈ ಹಿನ್ನೆಲೆಯಲ್ಲಿ ತಲ್ವಾರ್ ದಂಪತಿಗೆ ಸುಪ್ರೀಂ ಕೋರ್ಟ್ ನೋಟಿಸ್ ಸಹ ಜಾರಿ ಮಾಡಿದೆ.
ಆರುಷಿ ಹಾಗೂ ಹೇಮರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ 2013ರಲ್ಲಿ ದಂಪತಿಯನ್ನು ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ ಕಳೆದ ವರ್ಷ ಅಕ್ಟೋಬರ್ 12ರಂದು ಅಲಹಬಾದ್ ಹೈಕೋರ್ಟ್ ತಲ್ವಾರ್ ದಂಪತಿಯನ್ನು ಖುಲಾಸೆಗೊಳಿಸಿತ್ತು. ಈ ಹಿನ್ನಲೆಯಲ್ಲಿ ದಂಪತಿಗಳು ಬಿಡುಗಡೆಯಾಗಿದ್ದರು.
ತಲ್ವಾರ್ ದಂಪತಿಯ ಪುತ್ರಿ 13 ವರ್ಷದ ಆರುಷಿ 2008ರಲ್ಲಿ ನೋಯ್ಡಾದ ತನ್ನ ಮನೆಯ ಕೊಠಡಿಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮರುದಿನ ಮನೆಯ ಮಹಡಿ ಮೇಲೆ ಮನೆಗೆಲಸಗಾರ ನೇಪಾಳ ಮೂಲದ ಹೇಮರಾಜ್ನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನೋಯ್ಡಾದಲ್ಲಿ 2008ರಲ್ಲಿ ನಡೆದಿದ್ದ ಈ ಜೋಡಿ ಕೊಲೆ ದೇಶವನ್ನು ಬೆಚ್ಚಿಬೀಳಿಸಿತ್ತು.
Supreme Court,Admits CBI Appeal, Against Aarushi Talwar’s Parents’