ಬರ್ಮಿಂಗ್ ಹ್ಯಾಮ್: ಲಂಡನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 274 ರನ್ ಗಳಿಗೆ ಸರ್ವಪತನ ಕಂಡಿದೆ.
ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 287 ರನ್‌ಗಳಿಗೆ ಕಟ್ಟಿಹಾಕಿರುವ ಭಾರತ, ಎರಡನೇ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರ ಅಮೋಘ ಶತಕದ(149) ಹೊರತಾಗಿಯೂ 76 ಓವರ್‌ಗಳಲ್ಲಿ 274 ರನ್‌ಗಳಿಗೆ ಆಲೌಟಾಗಿದೆ. ಈ ಮೂಲಕ ಭಾರತ 13 ರನ್‌ಗಳ ಅಲ್ಪ ಹಿನ್ನಡೆ ಅನುಭವಿಸಿದೆ.
ಆರಂಭಿಕ ಆಟಗಾರರಾದ ಮುರಳಿ ವಿಜಯ್(20) ಹಾಗೂ ಶಿಖರ್ ಧವನ್ (26)ಮೊದಲ ವಿಕೆಟ್‌ಗೆ 50 ರನ್ ಪೇರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಸ್ಯಾಮ್ ಕರ್ರನ್ ಓಪನರ್‌ಗಳ ಜತೆಗೆ ಕೆಎಲ್ ರಾಹುಲ್(4)ರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ತ್ರಿಬಲ್ ಆಘಾತ ನೀಡಿದರು.
ಭಾರತದ ಪರ, ವಿರಾಟ್ ಕೊಹ್ಲಿ149, ಮುರಳಿ ವಿಜಯ್ 20, ಶಿಖರ್ ಧವನ್ 26, ಅಜಿಂಕ್ಯ ರಹಾನೆ 15, ಕೆಎಲ್ ರಾಹುಲ್ 4, ದಿನೇಶ್ ಕಾರ್ತಿಕ ಶೂನ್ಯ, ಹಾರ್ದಿಕ್ ಪಾಂಡ್ಯ 22 ರನ್ ಗಳಿಸಿದ್ದಾರೆ.
ಇನ್ನು ಇಂಗ್ಲೆಂಡ್ ಪರ ಸ್ಯಾಮ್ ಕರ್ರನ್ ನಾಲ್ಕು ಮತ್ತು ಜೇಮ್ಸ್ ಆಂಡೆರ್ಸನ್, ಆದಿಲ್ ರಶೀದ್ ಹಾಗೂ ಬೆನ್ ಸ್ಟೋಕ್ಸ್ ತಲಾ ಎರಡು ವಿಕೆಟುಗಳನ್ನು ಪಡೆದು ಮಿಂಚಿದರು.
ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರ ಪಡೆ ಎರಡನೇ ದಿನದಾಟದ ಅಂತ್ಯಕ್ಕೆ 3.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದೆ.