ಬೆಂಗಳೂರು, ಜು.23- ಮುಂಬರುವ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ರಣತಂತ್ರ ರೂಪಿಸಿರುವ ಬಿಜೆಪಿಗೆ 11 ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಸವಾಲಾಗಿ ಪರಿಣಮಿಸಿದೆ.
ಎಷ್ಟೇ ಅಳೆದುತೂಗಿದರೂ 11 ಕ್ಷೇತ್ರಗಳಲ್ಲಿ ಎದುರಾಳಿಗಳಿಗೆ ಪ್ರಬಲ ಪೈಪೆÇೀಟಿ ನೀಡುವಂತಹ ಅಭ್ಯರ್ಥಿಗಳು ಸಿಗದಿರುವುದು ರಾಜ್ಯ ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ.
ಅನ್ಯ ಪಕ್ಷಗಳ ಅಭ್ಯರ್ಥಿಗಳನ್ನು ಆಪರೇಷನ್ ಕಮಲ ನಡೆಸಿ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆಯಾದರೂ ಕಾಂಗ್ರೆಸ್-ಜೆಡಿಎಸ್‍ಗೆ ಸಡ್ಡು ಹೊಡೆಯುವಂತಹ ಅಭ್ಯರ್ಥಿಗಳು ಸಿಗದಿರುವುದು ಕಮಲ ನಾಯಕರನ್ನು ನಿದ್ದೆಗೆಡುವಂತೆ ಮಾಡಿದೆ.
ಮೇಲ್ನೋಟಕ್ಕೆ 28 ಕ್ಷೇತ್ರಗಳಲ್ಲೂ ನಾವು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಬಿಜೆಪಿ ನಾಯಕರು ಎದೆ ತಟ್ಟಿ ಹೇಳಿಕೊಂಡರೂ ಕನಿಷ್ಠ ಪಕ್ಷ 11 ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆ ನೀಡುವಂತಹ ಅಭ್ಯರ್ಥಿಗಳ ಕೊರತೆ ಎದುರಾಗಿದೆ.
ಈವರೆಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದವು. ಹೀಗಾಗಿ 1999ರ ಚುನಾವಣೆಯ ನಂತರ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತಿತ್ತು.
ಆದರೆ ಹಾವು-ಮುಂಗುಸಿಯಂತಿದ್ದ ಕಾಂಗ್ರೆಸ್-ಜೆಡಿಎಸ್ ವಿಧಾನಸಭೆ ಚುನಾವಣೆ ನಂತರ ದೋಸ್ತಿ ಮಾಡಿಕೊಂಡು ಸರ್ಕಾರ ರಚನೆ ಮಾಡಿರುವುದು ಹಾಗೂ ಲೋಕಸಭೆ ಚುನಾವಣೆಯಲ್ಲಿ ಪರಸ್ಪರ ಹೊಂದಾಣಿಕೆ ಮೂಲಕವೇ ಸ್ಪರ್ಧಿಸಲು ಮುಂದಾಗಿರುವುದು ಬಿಜೆಪಿ ನಾಯಕರನ್ನು ಕಂಗೆಡೆಸಿದೆ.
ಎಲ್ಲಿಲ್ಲಿ ಕೊರತೆ:
28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ 11 ಕ್ಷೇತ್ರಗಳಲ್ಲಿ ಹೇಳಿ ಕೊಳ್ಳುವಂತಹ ಅಭ್ಯರ್ಥಿಗಳು ಸಿಗುತ್ತಿಲ್ಲ. ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಸಮಸ್ಯೆಯಿಲ್ಲ.
ಒಂದೊಂದು ಕ್ಷೇತ್ರಕ್ಕೆ ಕನಿಷ್ಠ ಐದರಿಂದ ಎಂಟು ಅಭ್ಯರ್ಥಿಗಳು ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಹಳೇ ಮೈಸೂರು ಭಾಗದಲ್ಲಿ ಕಮಲ ಪಡೆಗೆ ಅಭ್ಯರ್ಥಿಗಳದ್ದೇ ಚಿಂತೆ.
ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಗೂ ರಾಯಚೂರಿನಲ್ಲಿ ಎರಡೂ ಪಕ್ಷಗಳಿಗೆ ಸ್ಪರ್ಧೆವೊಡ್ಡುವ ಅಭ್ಯರ್ಥಿಗಳು ಸಿಗುತ್ತಿಲ್ಲ.
ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಇದ್ದರೂ ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮಾಡಿಕೊಂಡರೆ ಗೆಲುವಿಗೆ ಹರಸಾಹಸ ಪಡಬೇಕಾಗುತ್ತದೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹಾಲಿ ಸಂಸದ ಧ್ರುವನಾರಾಯಣ್ ವಿರುದ್ಧ ಮಾಜಿ ಸಚಿವ ಎಂ.ಶಿವಣ್ಣ ಹೆಸರು ಕೇಳಿಬಂದಿದೆಯಾದರೂ ಈವರೆಗೂ ಅಂತಿಮಗೊಂಡಿಲ್ಲ.
ಆಪರೇಷನ್ ಇಲ್ಲವೇ ಸೇರ್ಪಡೆ:
ಚುನಾವಣೆಗೆ ಕೆಲ ತಿಂಗಳು ಇದ್ದು, ಈಗಲೇ ಕಾರ್ಯತಂತ್ರ ಆರಂಭಿಸಿರುವ ರಾಜ್ಯ ಬಿಜೆಪಿ ನಾಯಕರು ಆಪರೇಷನ್ ಮೂಲಕ ಇಲ್ಲವೇ ಸೇರ್ಪಡೆ ಮೂಲಕ ಕಾಂಗ್ರೆಸ್ ಅಥವಾ ಜೆಡಿಎಸ್ ನ ಪ್ರಬಲ ನಾಯಕರನ್ನು ತಮ್ಮತ್ತ ಸೆಳೆಯುವ ಯತ್ನ ಆರಂಭಿಸಿದ್ದಾರೆ. ಮಾಹಿತಿ ಪ್ರಕಾರ ತುಮಕೂರಿನ ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಅಲ್ಲಿ ಯುವ ಬಿಜೆಪಿಯ ಮಾಜಿ ಸಂಸದ ಜಿ.ಎಚ್. ಬಸವರಾಜು ಅಷ್ಟೇನು ಪ್ರಬಲರಾಗಿ ಉಳಿದಿಲ್ಲ. ಈ ಸಾರಿಯೂ ಗೆಲ್ಲುವುದು ಅನುಮಾನ. ಇದರಿಂದ ಮುದ್ದಹನುಮೇಗೌಡರನ್ನು ಸೆಳೆಯಲು ಅದಾಗಲೇ ಬಿಜೆಪಿ ಸ್ಕೆಚ್ ಹಾಕಿದೆ. ಅಂತೆಯೇ ಬಿಜೆಪಿ ಕೊಂಚ ಅಸ್ಥಿತ್ವ ಇರುವ ಚಿತ್ರದುರ್ಗದಲ್ಲಿ ಕೂಡ ಸಂಸದ ಚಂದ್ರಪ್ಪರನ್ನು ಕರೆತರಲು ಯತ್ನಿಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೆಲವೆಡೆ ಕಾಂಗ್ರೆಸ್ ನಾಯಕರನ್ನು ಸೆಳೆದು ಇನ್ನಷ್ಟು ಬಲಿಷ್ಠವಾಗುವ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.
2014ರಲ್ಲಿ ಬಿಜೆಪಿ ಸೋಲು: ಶೀಘ್ರವೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಅಗಮಿಸುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದರ ಬಗ್ಗೆ, ಅದರಲ್ಲೂ ಕಳೆದ ಬಾರಿ ಸೋತ ಕ್ಷೇತ್ರಗಳಿಗೆ ಯಾರನ್ನು ಅಂತಿಮಗೊಳಿಸಿದ್ದೀರಿ ಎಂದು ಕೇಳಿದರೆ ಅವರಿಗೆ ಏನು ಉತ್ತರ ಕೊಡುವುದು ಅನ್ನುವ ಗೊಂದಲದಲ್ಲಿ ರಾಜ್ಯ ಬಿಜೆಪಿ ನಾಯಕರು ಇದ್ದಾರೆ.
2014ರ ಚುನಾವಣೆಯಲ್ಲಿ ಸೋತ ಕ್ಷೇತ್ರಗಳಾದ ಚಿಕ್ಕೋಡಿಯಲ್ಲಿ ಕೊಂಚ ಮಾತ್ರ ನಿರೀಕ್ಷೆ ಇದೆ. ಏಕೆಂದರೆ ಅಂದು ಸೋತಿದ್ದ ರಮೇಶ್ ವಿಶ್ವನಾಥ್ ಕತ್ತಿ ಅವರ ಸೋದರ ಉಮೇಶ್ ಕತ್ತಿ ಇಲ್ಲಿ ಪ್ರಬಲವಾಗಿದ್ದು, ಕಳೆದ ಸಾರಿ ಕೂಡ ರಮೇಶ್ ಕತ್ತಿ ಕೇವಲ ಮೂರು ಸಾವಿರ ಮತಗಳಿಂದ ಪ್ರಕಾಶ್ ಹುಕ್ಕೇರಿ ವಿರುದ್ಧ ಸೋಲನುಭವಿಸಿದ್ದರು. ಇನ್ನು ಕಲಬುರುಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರೇವುನಾಯಕ್ ಬೆಳಮಗಿ 75 ಸಾವಿರ ಮತಗಳ ಭಾರಿ ಅಂತರದ ಸೋಲು ಕಂಡಿದ್ದರು. ಈ ಸಾರಿ ವಿಧಾನಸಭೆ ಟಿಕೆಟ್ ಸಿಗದ ಕಾರಣ ಅವರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ರಾಯಚೂರಿನಲ್ಲಿ ಕಾಂಗ್ರೆಸ್‍ನ ಬಿ.ವಿ. ನಾಯಕ್ ವಿರುದ್ಧ ಅರಕೆರಾ ಶಿವನಗೌಡ ನಾಯಕ್ 1499 ಮತಗಳ ಅಂತರದ ಸೋಲು ಕಂಡಿದ್ದರಾದರೂ, ಸಂಸದರಾಗಿ ನಾಯಕ್ ಉತ್ತಮ ಕೆಲಸ ಮಾಡಿದ್ದು, ಜೆಡಿಎಸ್ ಬೆಂಬಲದೊಂದಿಗೆ ಈ ಸಾರಿ ಇವರೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಚಿತ್ರದುರ್ಗದಲ್ಲಿ ಬಿ.ಎನ್. ಚಂದ್ರಪ್ಪ ಅವರು ಬಿಜೆಪಿಯ ಜನಾರ್ಧನ ಸ್ವಾಮಿ ವಿರುದ್ಧ 1 ಲಕ್ಷ ಮತಗಳ ಅಂತರದ ಗೆಲುವು ಸಾಧಿಸಿದ್ದರು. ಈ ಸಾರಿ ಇಲ್ಲಿಯೂ ಜೆಡಿಎಸ್ ಕೈ ಜೋಡಿಸಿದರೆ ಗೆಲುವು ಕೈಗೆ ಸುಲಭವಾಗಲಿದೆ. ತುಮಕೂರಿನಲ್ಲಿ ಮುದ್ದಹನುಮೇಗೌಡರು ಬಿಜೆಪಿಯ ಜಿ.ಎಚ್. ಬಸವರಾಜ್ ವಿರುದ್ಧ 74 ಸಾವಿರ ಮತಗಳ ಅಂತರದ ಗೆಲುವು ಸಾಧಿಸಿದ್ದರು.
ಚಾಮರಾಜನಗರದಲ್ಲಿ ಆರ್. ಧ್ರುವನಾರಾಯಣ ಅವರು ಬಿಜೆಪಿಯ ಎ.ಆರ್. ಕೃಷ್ಣಮೂರ್ತಿ ವಿರುದ್ಧ 1.41 ಲಕ್ಷ ಮತಗಳ ಅಂತರದ ಗೆಲುವು ಸಾಧಿಸಿದ್ದರು. ಇಲ್ಲಿ ಬಿಜೆಪಿಗೆ ಬೇರೆ ಅಭ್ಯರ್ಥಿ ಹುಡುಕಲೇಬೇಕಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಮುನಿರಾಜುಗೌಡ ಪಿ. ಬರೋಬ್ಬರಿ 2.31 ಲಕ್ಷ ಮತಗಳ ಅಂತರದ ಹೀನಾಯ ಸೋಲು ಕಂಡಿದ್ದರು. ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಸೋತಿರುವ ಮುನಿರಾಜುಗೌಡ ತಾವು ದುರ್ಬಲರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಡಾ. ಎಂ. ವೀರಪ್ಪ ಮೊಯ್ಲಿ ಎರಡನೇ ಬಾರಿ ಸ್ಪರ್ಧಿಸಿ ಬಿಜೆಪಿಯ ಬಿ.ಎನ್. ಬಚ್ಚೇಗೌಡರ ವಿರುದ್ಧ 9 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈ ಸಾರಿ ಬಚ್ಚೇಗೌಡರಿಗೆ ವಯಸ್ಸಾದ ಕಾರಣ ಟಿಕೆಟ್ ಸಿಗುವುದು ಅನುಮಾನ. ಕೋಲಾರದಲ್ಲಿ ಕೆ.ಹೆಚ್. ಮುನಿಯಪ್ಪ ಉತ್ತಮ ಸ್ಥಿತಿಯಲ್ಲಿದ್ದಾರೆ. ಇಲ್ಲಿಯೂ ಬಿಜೆಪಿಗೆ ನೆಲೆ ಇಲ್ಲ. ಆದ್ದರಿಂದ ಗೆದ್ದ ಕ್ಷೇತ್ರದಲ್ಲೇ ಮತ್ತೆ ಗೆಲ್ಲುವುದು ಕಷ್ಟವಾಗಿರುವಾಗ ಗೆಲುವಿಗಾಗಿ ಇಲ್ಲೆಲ್ಲಾ ಹರಸಾಹಸ ಪಡಲೇಬೇಕಿದೆ.
ಹಾಸನದಲ್ಲಿ ಸದ್ಯ ಒಂದು ಕ್ಷೇತ್ರ ಬಿಟ್ಟು ಎಲ್ಲಾ ವಿಧಾನಸಭೆ ಕ್ಷೇತ್ರ ಗೆದ್ದಿರುವ ಜೆಡಿಎಸ್ ಭರ್ಜರಿಯಾಗಿ ಗೆಲ್ಲುವ ಸೂಚನೆ ಕೊಟ್ಟಿದೆ. ಇಲ್ಲಿ ಕಳೆದ ಸಾರಿ 1 ಲಕ್ಷ ಮತಗಳ ಭಾರಿ ಅಂತರದಿಂದ ದೇವೇಗೌಡರು ಗೆದ್ದಿದ್ದರು. ಇಲ್ಲಿ ಗೆಲ್ಲುವುದು ಬಿಜೆಪಿಗೆ ಕನಸಿನ ಮಾತು. ಇನ್ನು ಮಂಡ್ಯದಲ್ಲಿ ಜೆಡಿಎಸ್ ಕ್ಲೀನ್ ಸ್ವೀಪ್ ಮಾಡಿದೆ. ಇಲ್ಲಿ ಗೆದ್ದಿದ್ದ ಸಿ.ಎಸ್. ಪುಟ್ಟರಾಜು 5 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‍ನ ರಮ್ಯಾ ವಿರುದ್ಧ ಗೆದ್ದಿದ್ದರು. ಆದರೆ ಈ ಸಾರಿ ದೇವೇಗೌಡರು ಹಾಸನ ಬಿಟ್ಟು ಇಲ್ಲಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾತಿದೆ. ಇಲ್ಲಿ ಕೂಡ ಬಿಜೆಪಿಗೆ ನೆಲೆಯಿಲ್ಲ.
Lokasabha Election,BJP,Strong Candidates,Selection,challange