ಬೌರಿಂಗ್ ಇನ್‍ಸ್ಟಿಟ್ಯೂಟ್ ಲಾಕರ್‍ನಲ್ಲಿ ಹಣ ಪತ್ತೆ ಪ್ರಕರಣ: ಇಬ್ಬರು ಸಚಿವರ ಹೆಸರು ತಳುಕು..!

ಬೆಂಗಳೂರು, ಜು.23- ನಗರದ ಪ್ರತಿಷ್ಠಿತ ಬೌರಿಂಗ್ ಇನ್‍ಸ್ಟಿಟ್ಯೂಟ್ ನಲ್ಲಿ ಉದ್ಯಮಿ ಅವಿನಾಶ್ ಅಮರ್ ಲಾಲ್ ಕುಕ್ರೇಜ್ ಲಾಕರ್‍ನಲ್ಲಿ ಪತ್ತೆಯಾಗಿರುವ ಬೃಹತ್ ಪ್ರಮಾಣದ ಹಣದಲ್ಲಿ ರಾಜ್ಯದ ಇಬ್ಬರು ಸಚಿವರು ಹಾಗೂ ಕೆಲ ರಾಜಕಾರಣಿಗಳ ಹೆಸರು ಕೇಳಿಬಂದಿದೆ.

ಶುಕ್ರವಾರ ಆದಾಯ ತೆರಿಗೆ(ಐಟಿ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಉದ್ಯಮಿ ಅವಿನಾಶ್ ಅಮರ್‍ಲಾಲ್ ಕುಕ್ರೇಜ್ ಲಾಕರ್‍ನಲ್ಲಿ 550 ಕೋಟಿ ಮೌಲ್ಯದ ಆಸ್ತಿ ದಾಖಲೆ ಪತ್ರಗಳನ್ನು ಪತ್ತೆಹಚ್ಚಿದ್ದರು.

ಕಳೆದೆರಡು ದಿನಗಳಿಂದ ಉದ್ಯಮಿಯಿಂದ ವಶಪಡಿಸಿಕೊಂಡಿರುವ ಕೆಲವು ದಾಖಲೆಗಳ ಇಂಚಿಂಚು ಮಾಹಿತಿಯನ್ನು ಐಟಿ-ಇಡಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

ಇಬ್ಬರು ಸಚಿವರು ಭಾಗಿ ?:
ಮೂಲಗಳ ಪ್ರಕಾರ ಅವಿನಾಶ್ ಅಮರ್‍ಲಾಲ್ ಕುಕ್ರೇಜ್ ಲಾಕರ್‍ನಲ್ಲಿ ವಶಪಡಿಸಿಕೊಂಡಿರುವ 3.90 ಕೋಟಿ ನಗದು, 7.80 ಕೋಟಿ ರೂ. ಮೌಲ್ಯದ ಚಿನ್ನಾಭರಣ, 15 ಲಕ್ಷ ರೂ. ಮೌಲ್ಯದ ರೊಲೆಕ್ಸ್ ವಾಚ್, 30ರಿಂದ 35 ಲಕ್ಷ ರೂ. ಮೌಲ್ಯದ ಪ್ಯೂಜಿಯಟ್ ವಾಚ್ ಕಂಡುಬಂದಿತ್ತು. ಅಲ್ಲದೇ ದೇವನಹಳ್ಳಿ, ಬೇಗೂರು ಮತ್ತಿತರ ಕಡೆಗಳಲ್ಲಿನ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳು, ಸಹಿ ಮಾಡಿರುವ ಚೆಕ್ ಕಂಡುಬಂದಿತ್ತು.

ಈ ವೇಳೆ ಹಣ ಮತ್ತು ವಜ್ರಾಭರಣ ನೀವೆ ಇಟ್ಟುಕೊಳ್ಳಿ, ಆದರೆ, ಆಸ್ತಿ ಪತ್ರ ಮಾತ್ರ ಕೊಡಿ ಎಂದು ಉದ್ಯಮಿ ಅವಿನಾಶ್ ಆಮಿಷ ಒಡಿದ್ದರು. ಕೆಲವರು ಅಪರಿಚಿತರು ಫೆÇೀನ್ ಮಾಡಿ ಆ ವಸ್ತುಗಳನ್ನು ಅವಿನಾಶ್ ಅವರಿಗೆ ನೀಡುವಂತೆ ಒತ್ತಾಯಿಸಿದರು ಎನ್ನಲಾಗಿದೆ.

ಕೆಲವರು ನಾನಿಲ್ಲದ ಸಂದರ್ಭದಲ್ಲಿ ನನ್ನ ಮನೆಯ ಹತ್ತಿರ ಹೋಗಿ ವಿಚಾರಿಸಿದ್ದಾರೆ. ಮತ್ತೊಬ್ಬ ಕಚೇರಿಗೆ ಬಂದು ಆಸ್ತಿ ಪತ್ರ ನೀಡಿದರೆ 5 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಬೌರಿಂಗ್ ಇನ್‍ಸ್ಟಿಟ್ಯೂಟ್ ಕಾರ್ಯದರ್ಶಿ ಶ್ರೀಕಾಂತ್ ಬಹಿರಂಗಪಡಿಸಿದ್ದರು.

ಇದರಲ್ಲಿ ಇಬ್ಬರು ಪ್ರಭಾವಿ ಸಚಿವರು ಹಾಗೂ ಬಳ್ಳಾರಿ ಮೂಲದ ಕೆಲ ರಾಜಕಾರಣಿಗಳು ಕೂಡ ಶಾಮೀಲಾಗಿದ್ದಾರೆಂದು ಹೇಳಲಾಗುತ್ತಿದ್ದು, ತನಿಖೆಯಿಂದ ಎಲ್ಲವೂ ಹೊರಬೀಳುತ್ತದೆ ಎಂಬ ಭೀತಿಯಿಂದಾಗಿಯೇ ಅವಿನಾಶ್ ನನಗೆ ಅದೊಂದು ದಾಖಲೆಯನ್ನು ಮಾತ್ರ ಕೊಟ್ಟುಬಿಡಿ ಎಂದು ಅಂಗಲಾಚಿದ.
ಈ ದಾಖಲೆಯನ್ನು ಅಧಿಕಾರಿಗಳು ಪರಿಶೀಲನೆಗೊಳಪಡಿಸಿದಾಗ ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರು ಕೇಳಿಬಂದಿವೆ. ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಸಂಬಂಧಪಟ್ಟವರಿಗೆ ನೋಟಿಸ್ ನೀಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಹವಾಲ ದಂಧೆ:
ಇನ್ನು ಉದ್ಯಮಿ ಅವಿನಾಶ್ ಹವಾಲ ದಂಧೆಯನ್ನು ನಡೆಸಿರುವ ಬಗ್ಗೆ ಐಟಿ ಮತ್ತು ಇಡಿ ಅಧಿಕಾರಿಗಳು ಫೆಮಾ ಕಾಯ್ದೆಯಡಿ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಹಾಂಗ್‍ಕಾಂಗ್‍ನಿಂದ ಒಂದೂವರೆ ಲಕ್ಷ ವಹಿವಾಟು ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ತನಿಖಾ ತಂಡ ಫೆಮಾ ಕಾಯ್ದೆಯಡಿ ತನಿಖೆ ನಡೆಸುತ್ತಿರುವುದರಿಂದ ಅವಿನಾಶ್‍ಗೆ ಇನ್ನಷ್ಟು ಕಾನೂನಿನ ಸಂಕಷ್ಟ ಎದುರಾಗಲಿದೆ.

ಸಿಕ್ಕಿದ್ದು 800 ಕೋಟಿ:
ಶುಕ್ರವಾರ ಇಡಿ ಮತ್ತು ಐಟಿ ಅಧಿಕಾರಿಗಳು ಬೌರಿಂಗ್ ಇನ್‍ಸ್ಟಿಟ್ಯೂಟ್‍ನ 73 ಮತ್ತು 76ನೇ ಲಾಕರ್‍ನಲ್ಲಿ ವಶಪಡಿಸಿಕೊಂಡ ಮೌಲ್ಯ ಒಟ್ಟು 800 ಕೋಟಿ ಎಂದು ಅಂದಾಜಿಸಲಾಗಿದೆ.

ಶನಿವಾರ 550 ಕೋಟಿ ಎಂದು ಹೇಳಲಾಗಿತ್ತು. ಕಳೆದೆರಡು ದಿನಗಳಿಂದ ಅಧಿಕಾರಿಗಳು ಲೆಕ್ಕ ಹಾಕಿರುವಂತೆ ಒಟ್ಟು ಮೌಲ್ಯ 800 ಕೋಟಿ ಎಂದು ಅಂದಾಜಿಸಲಾಗಿದೆ.

ಅಧಿಕಾರಿಗಳಿಗೆ ಬಗೆದಷ್ಟೂ ಆದಾಯದ ಮೂಲ ಸಿಗುತ್ತಿದ್ದು, ಇದರ ಹಿಂದೆ ದೊಡ್ಡ ದೊಡ್ಡ ಕುಳಗಳಿರುವ ಶಂಕೆ ವ್ಯಕ್ತವಾಗಿದೆ. ದಾಖಲೆಗಳಲ್ಲಿ ಪ್ರತಿಯೊಂದನ್ನು ಅವಿನಾಶ್ ದಾಖಲಿಸಿದ್ದಾರೆ. ಯಾರ್ಯಾರ ಜೊತೆ ವ್ಯವಹಾರ ನಡೆಸಲಾಗಿದೆ. ಹಣದ ವಹಿವಾಟು, ಹೂಡಿಕೆ, ಉದ್ಯಮಿಗಳ ಹೆಸರು,ದೂರವಾಣಿ ಸಂಖ್ಯೆ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಬರೆದಿಟ್ಟಿದ್ದಾರೆ. ಈಗ ಈವೆಲ್ಲವೂ ಅಧಿಕಾರಿಗಳ ಕೈಗೆ ಸೇರಿರುವುದರಿಂದ ಸದ್ಯದಲ್ಲೇ ಇನ್ನಷ್ಟು ಕುಳಗಳ ಬಣ್ಣ ಬಯಲಾಗಲಿದೆ.

ನೋಟಿಸ್ ಜಾರಿ:
ಇನ್ನು ಉದ್ಯಮಿ ಅವಿನಾಶ್‍ಗೆ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆ ವೇಳೆ ತನ್ನ ಜೊತೆ ವಹಿವಾಟು ನಡೆಸಿರುವ ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಮತ್ತಿತರ ಹೆಸರುಗಳನ್ನು ಕುಕ್ರೇಜ್ ಬಾಯ್ಬಿಟ್ಟರೆ ಕೆಲವರಿಗೆ ನಡುಕ ಶುರುವಾಗುವುದು ಗ್ಯಾರಂಟಿ.

Boring Institute locker case,Two ministers name,Investigations

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ