ಮೋದಿ ಸರ್ಕಾರದ ವಿರುದ್ಧ ವಿಶ್ವಾಸ ನಿರ್ಣಯ, ವಿಪಕ್ಷಗಳ ಬಲ ಹೆಚ್ಚಿಸಿಕೊಳ್ಳುವ ಯತ್ನ ಸಫಲವಾಗುವುದೇ?

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶುಕ್ರವಾರ ಮೊದಲ ಅವಿಶ್ವಾಸ ಮತವನ್ನು ಎದುರಿಸುತ್ತಿದ್ದು, ಆಡಳಿತಾರೂಢ ಎನ್ ಡಿಎ ಮತ್ತು ವಿರೋಧ ಪಕ್ಷಗಳು ತಮ್ಮ ಬಲ ಹೆಚ್ಚಿಸಿಕೊಳ್ಳುವ ಕೊನೆಯ ಕ್ಷಣದ ಪ್ರಯತ್ನಗಳನ್ನು ನಡೆಸಿವೆ.
ಒಟ್ಟು 312 ಸಂಸದರ ಬೆಂಬಲ ಹೊಂದಿರುವ ಎನ್ ಡಿಎಗೆ ಅವಿಶ್ವಾಸಮತದಲ್ಲಿ ಸೋಲುವ ಭಯ ಇಲ್ಲ. ಹಾಗಿದ್ದರೂ ಈತನಕ ಯಾವುದೇ ನಿರ್ಧಾರ ಕೈಗೊಂಡಿಲ್ಲದ ಎಐಎಡಿಎಂಕೆ ಇತರೆ ಮೈತ್ರಿ ಪಕ್ಷಗಳನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ವಿರೋಧ ಪಕ್ಷಗಳು ತಮ್ಮ ಬಲ ಹೆಚ್ಚಿಸಿಕೊಳ್ಳುವ ತಂತ್ರ ಹೆಣೆಯುತ್ತಿವೆ.
ಅವಿಶ್ವಾಸ ನಿರ್ಣಯವನ್ನು ಟಿಡಿಪಿ ಮಂಡಿಸಿದೆ ಎಂಬುದೇ ವಿರೋಧ ಪಕ್ಷಗಳ ಗುಂಪಿಗೆ ಇರುವ ದೊಡ್ಡ ತೊಡಕು. 11 ಸದಸ್ಯರನ್ನು ಹೊಂದಿರುವ ಟಿಆರ್‌ಎಸ್‌ ಮತ್ತು 20 ಸದಸ್ಯರಿರುವ ಬಿಜೆಡಿ ಈ ಕಾರಣಕ್ಕಾಗಿಯೇ ಅವಿಶ್ವಾಸವನ್ನು ಬೆಂಬಲಿಸದಿರಲು ನಿರ್ಧರಿಸಿವೆ. ಹೀಗಾಗಿ ಈ ಎರಡೂ ಪಕ್ಷಗಳು ಗೈರು ಹಾಜರಾಗುವ ಸಾಧ್ಯತೆಯೇ ಹೆಚ್ಚು.
ವಿಪಕ್ಷಗಳ ಮಾಸ್ಚರ್ ಪ್ಲಾನ್ ಗೆ ಮೋದಿ ಸರ್ಕಾರದ ಚೆಕ್!
ಇನ್ನು ಸದನದಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ಕಾರಣಕ್ಕೆ ಅವಿಶ್ವಾಸ ನಿರ್ಣಯದ ಬಗ್ಗೆ ಮಾತನಾಡಲು ಬಿಜೆಪಿಗೆ ಹೆಚ್ಚು ಸಮಯ ದೊರೆಯುತ್ತದೆ. ಅನುರಾಗ್‌ ಠಾಕೂರ್‌, ಹುಕುಮ್ ದೇವ್‌ ನಾರಾಯಣ್‌ ಮತ್ತು ವೀರೇಂದ್ರ ಸಿಂಗ್‌ ಮಸ್ತ್‌ ಅವರಂತಹ ಕಿರಿಯ ಮುಖಂಡರು ನಿರ್ಣಯಕ್ಕೆ ಸಂಬಂಧಿಸಿ ಮಾತನಾಡುವ ಸಾಧ್ಯತೆ ಇದೆ. ಇಂತಹ ಕಿರಿಯ ಮುಖಂಡರೇ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ ಎಂಬುದನ್ನು ತೋರಿಸುವುದು ಸರ್ಕಾರದ ಉದ್ದೇಶ. ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಈ ಭಾಷಣದಲ್ಲಿ ಲೋಕಸಭಾ ಚುನಾವಣೆಯನ್ನು ಅವಧಿಗೆ ಮುನ್ನವೇ ನಡೆಸುವ ಸುಳಿವು ಸಿಗಬಹುದೇ ಎಂಬ ಕುತೂಹಲ ಇದೆ.
ಅವಿಶ್ವಾಸ ನಿರ್ಣಯದ ಪರವಾಗಿ ವಿರೋಧ ಪಕ್ಷಗಳಿಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮೊದಲಿಗೆ ಮಾತನಾಡಲಿದ್ದಾರೆ. ಬಳಿಕ ಮಲ್ಲಿಕಾರ್ಜುನ ಖರ್ಗೆ, ಜ್ಯೋತಿರಾದಿತ್ಯ ಸಿಂಧಿಯಾ ಅಥವಾ ಕೆ.ಸಿ. ವೇಣುಗೋಪಾಲ್‌ ಮಾತನಾಡುವ ಸಾಧ್ಯತೆ ಇದೆ. ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ಕಾಂಗ್ರೆಸ್ ಗೆ ಹೆಚ್ಚಿನ ಸಮಯ ಸಿಗುವ ಸಾಧ್ಯತೆ ಕ್ಷೀಣವಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ