ಅವಿಶ್ವಾಸ ನಿರ್ಣಯಕ್ಕೆ ಬೆಂಬಲವಿಲ್ಲವೆಂದ ತಮಿಳುನಾಡು ಮುಖ್ಯಮಂತ್ರಿ ಎ.ಕೆ. ಪಳನಿಸ್ವಾಮಿ

ಚೆನ್ನೈ:ಜು-19: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಆಂಧ್ರಪ್ರದೇಶದ ತೆಲುಗು ದೇಶಂ (ಟಿಡಿಪಿ) ಪಕ್ಷವೇ ಹೊರತು ನಾವಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎ.ಕೆ. ಪಳನಿಸ್ವಾಮಿಯವರು ತಿಳಿಸಿದ್ದಾರೆ. ಈ ಮೂಲಕ ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ನಮ್ಮ ಬೆಂಬಲವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದು ನಾವಲ್ಲ, ಆಂಧ್ರಪ್ರದೇಶ. ಕಾವೇರಿ ನಿರ್ವಹಣಾ ಮಂಡಳಿ ಕುರಿತಂತೆ ಸಂಸತ್ತಿನಲ್ಲಿ ಕಳೆದ 22 ದಿನಗಳಿಂದ ಹೋರಾಡುತ್ತಲೇ ಇದ್ದೇವೆ. ಕಾವೇರಿ ವಿಚಾರ ನಮ್ಮ ವಿಷಯವಾಗಿದ್ದು, ಅವಿಶ್ವಾಸ ನಿರ್ಣಯ ಮಂಡನೆಯಲ್ಲ ಎಂದು ಹೇಳಿದ್ದಾರೆ.

ಕಾವೇರಿ ವಿಚಾರವಾಗಿ ನಾವು ಹೋರಾಟ ಮಾಡುತ್ತಲೇ ಇದ್ದೇವೆ. ನಮ್ಮೊಂದಿಗೆ ಯಾರು ಕೈಜೋಡಿಸಿದರು? ನಮ್ಮ ಸಹಾಯಕ್ಕೆ ಯಾವ ರಾಜ್ಯ ಬಂದಿತು? ಅವಿಶ್ವಾಸ ಮಂಡನೆ ಮಾಡಿದ್ದು ಟಿಡಿಪಿ ಪಕ್ಷ. ಪ್ರತೀ ಪಕ್ಷಕ್ಕೂ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಹಕ್ಕಿದೆ. ಅದನ್ನೇ ಟಿಡಿಪಿ ಮಾಡಿದೆ ಎಂದು ತಿಳಿಸಿದ್ದಾರೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ನಿರಾಕರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳು ನಿನ್ನೆಯಷ್ಟೇ ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿತ್ತು. ವಿಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅಂಗೀಕರಿಸಿದ್ದರು.

Monsoon Session,AIADMK,K Palaniswami, No Confidence Motion

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ