ನವದೆಹಲಿ:ಜು-20: ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಲಿಂಗಿಸಿದ್ದು ಹಾಗೂ ಬಳಿಕ ಕಣ್ಣು ಮಿಟಿಕಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಡೆಯನ್ನು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಖಂಡಿಸಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ನಡೆಯನ್ನು ‘ಚಿಪ್ಕೋ ಆಂದೋಲನ’ ಎಂದು ಬಣ್ಣಿಸಿದರು. ಈ ವೇಳೆ ಮಾತನಾಡಿದ ಸ್ಪೀಕರ್ ಮಹಾಜನ್ ಅವರು ರಾಹುಲ್ ಗಾಂಧಿ ಅವರು ಆಲಿಂಗಿಸಿದ್ದಕ್ಕೆ ನನ್ನ ಆಕ್ಷೇಪ ಇಲ್ಲ. ಆದರೆ ಪ್ರತಿಪಕ್ಷದ ಸಂಸದರೊಬ್ಬರು ಕುಳಿತಿರುವ ಪ್ರಧಾನಿಯನ್ನು ಆಲಿಂಗಿಸಿದ್ದಲ್ಲದೆ ನಂತರ ಕಣ್ಣು ಹೊಡೆದ ರೀತಿ ಸರಿ ಇಲ್ಲ ಎಂದರು.
ಮಲ್ಲಿಕಾರ್ಜುನ್ ಖರ್ಗೆ ಅವರು ಹಿರಿಯರು. ಸದನದ ನಿಯಮಗಳ ಬಗ್ಗೆ ಕಿರಿಯರಿಗೆ ಮಾರ್ಗದರ್ಶ ಮಾಡಬೇಕು ಎಂದು ಕಾಂಗ್ರೆಸ್ ಸಂಸದೀಯ ನಾಯಕರಿಗೂ ಸ್ಪೀಕರ್ ಸಲಹೆ ನೀಡಿದರು.
ಸದನದ ಪ್ರತಿಯೊಬ್ಬ ಸದಸ್ಯ ಪ್ರಧಾನಿ ಹುದ್ದೆಯ ಶಿಷ್ಟಾಚಾರದ ಕುರಿತು ತಿಳಿದಿರಬೇಕು ಮತ್ತು ಸದನದ ಶಿಸ್ತನ್ನು ಪಾಲಿಸಬೇಕು. ಎಲ್ಲರೂ ತಪ್ಪದೆ ಸದನದ ಶಿಸ್ತನ್ನು ಪಾಲಿಸಬೇಕು. ನನಗೆ ವೈಯಕ್ತಿಕವಾಗಿ ರಾಹುಲ್ ಗಾಂಧಿಯ ಮೇಲೆ ಯಾವುದೇ ದ್ವೇಷವಿಲ್ಲ. ರಾಹುಲ್ ನನ್ನ ಮಗನಿದ್ದಂತೆ ಎಂದು ಸ್ಪೀಕರ್ ತಿಳಿಸಿದರು.
Lokasabha,Rahul gandhi,sumitra mahajan