ಮಾಸ್ಕೋ: ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ನಾಕೌಟ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಇದೀಗ ಎಲ್ಲಕ ಚಿತ್ತ ಮುಂದಿನ ಕ್ವಾರ್ಟರ್ ಫೈನಲ್ಸ್ ಹಂತದತ್ತ ನೆಟ್ಟಿದ್ದು, ಯಾವ ಯಾವ ತಂಡಗಳು ಕ್ವಾರ್ಟರ್ ಫೈನಲ್ಸ್ ನಿಂದ ಸೆಮೀಸ್ ಗೆ ಹಾರಲಿವೆ ಎಂಬ ಲೆಕ್ಕಾಚಾರ ಶುರುವಾಗಿದೆ.
ಕ್ವಾರ್ಟರ್ ಫೈನಲ್ಸ್ ಹಂತದಲ್ಲಿ ಒಟ್ಟು 8 ತಂಡಗಳು ಸೆಣಸಾಡಲಿದ್ದು, ಇಂಗ್ಲೆಂಡ್, ಬ್ರೆಜಿಲ್, ಬೆಲ್ಜಿಯಂ, ಫ್ರಾನ್ಸ್, ಉರುಗ್ವೆ, ರಷ್ಯಾ ಕ್ರೊವೇಷಿಯಾ ಮತ್ತು ಸ್ವೀಡನ್ ತಂಡಗಳು ಸೆಣಸಾಡಲಿವೆ. ಜುಲೈ 6 ಶುಕ್ಕವಾರದಿಂದ ಕ್ವಾರ್ಟರ್ ಫೈನಲ್ಸ್ ಹಂತದ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದ ಉರುಗ್ವೆ ತಂಡ 1998ರ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸಲಿದ್ದು, ನಂತರ ಅದೇ ದಿನ ನಡೆಯುವ ಮತ್ತೊಂದು ಪಂದ್ಯದಲ್ಲಿ ಪ್ರಬಲ ಬ್ರೆಜಿಲ್ ತಂಡ ಬೆಲ್ಜಿಯಂ ವಿರುದ್ಧ ಸೆಣಸಾಡಲಿದೆ.
ಆ ಬಳಿಕ ಅಂದರೆ ಜುಲೈ 7ರಂದು ರಷ್ಯಾ ಮತ್ತು ಕ್ರೊವೇಷಿಯಾ ನಡುವಿನ ಪಂದ್ಯ ನಡೆಯಲಿದ್ದು, ಆ ಬಳಿಕ ಅದೇ ದಿನ ಮತ್ತೊಂದು ಪಂದ್ಯದಲ್ಲಿ ಸ್ವೀಡನ್ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಇನ್ನು ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿರುವ ಫ್ರಾನ್ಸ್, ಇಂಗ್ಲೆಂಡ್, ಬ್ರೆಜಿಲ್ ಮತ್ತು ಬೆಲ್ಜಿಯಂ ತಂಡಗಳು ಕ್ವಾರ್ಟರ್ ಫೈನಲ್ಸ್ ಹಂತದಲ್ಲಿ ತೀವ್ರ ಪೈಪೋಟಿ ನೀಡಲಿದ್ದು, ತೀವ್ರ ಜಿದ್ದಾಜಿದ್ದಿನ ಪಂದ್ಯಗಳಿಗಾಗಿ ಫುಟ್ಬಾಲ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಇನ್ನು ಟೂರ್ನಿಯ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಪ್ರಮುಖವಾಗಿದ್ದ ಬ್ರೆಜಿಲ್ ತಂಡದ ನೇಮರ್, ರೊನಾಲ್ಡಿನೋ ಉರುಗ್ವೆ ತಂಡದ ಸ್ಟಾರ್ ಆಟಗಾರ ಲೂಯಿಸ್ ಸೌರೆಜ್ ಸೇರಿದಂತೆ ಪ್ರಮುಖ ಆಟಗಾರರು ಫುಟ್ಬಾಲ್ ಅಭಿಮಾನಿಗಳ ಕೇಂದ್ರ ಬಿಂದುವಾಗಿದ್ದಾರೆ.