ಸುಳ್ಳಾಯ್ತು ಅಚಿಲ್ಸ್ ಬೆಕ್ಕಿನ ಭವಿಷ್ಯ; 1-0 ಅಂತರದಲ್ಲಿ ಬೆಲ್ಜಿಯಂ ಮಣಿಸಿದ ಫ್ರಾನ್ಸ್ ಫೈನಲ್ ಗೆ ಲಗ್ಗೆ!

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ನಲ್ಲಿ ಪ್ರಬಲ ಫ್ರಾನ್ಸ್ ದಾಖಲೆ ನಿರ್ಮಾಣ ಮಾಡಿದ್ದು, ಸೆಮಿ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 1-0 ಅಂತರದಲ್ಲಿ ಮಣಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ.
ಪಂದ್ಯದ 51ನೇ ನಿಮಿಷದಲ್ಲಿ ಫ್ರಾನ್ಸ್ ಸ್ಟ್ರೈಕರ್ ಉಮ್ಟಿಟಿ ಸಿಡಿಸಿ ಏಕೈಕ ಗೋಲಿನ ನೆರವಿನಿಂದ ಫ್ರಾನ್ಸ್ ತಂಡ ಬೆಲ್ಜಿಯಂ ತಂಡವನ್ನು ರೋಚಕವಾಗಿ ಮಣಿಸಿ 2018ರ ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶ ಮಾಡಿದೆ.
ಪಂದ್ಯದುದ್ದಕ್ಕೂ ಗೆಲುವಿಗಾಗಿ ಬೆಲ್ಜಿಯಂ ತಂಡ ಭಾರಿ ಹರಸಾಹಸವನ್ನೇ ಪಟ್ಟಿತಾದರೂ ಗೋಲು ಗಳಿಸುವಲ್ಲಿ ವಿಫಲವಾಯಿತು. ಪ್ರಮುಖವಾಗಿ 51ನೇ ನಿಮಿಷದಲ್ಲಿ ಫ್ರಾನ್ಸ್ ನ ಉಮ್ಟಿಟಿ ಹೆಡ್ ಮಾಡಿ ಗಳಿಸಿದ ಗೋಲು ಬೆಲ್ಜಿಯಂ ತಂಡವನ್ನು ಒತ್ತಡಕ್ಕೆ ನೂಕಿತು. ಪರಿಣಾಮ ಗೋಲು ಗಳಿಸಿದ ಬಳಿಕ ಆಕ್ರಮಣಕಾರಿ ಆಟಕ್ಕೆ ಬೆಲ್ಜಿಯಂ ಮೊರೆ ಹೋಯಿತಾದರೂ ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.
ಅಂತಿಮವಾಗಿ ಪಂದ್ಯದ ಅವಧಿ ಮುಕ್ತಾಯದ ವೇಳೆಗೆ ಬೆಲ್ಜಿಯಂ ತಂಡ 0-1 ಅಂತರದ ರೋಚಕ ಸೋಲು ಕಂಡು ಟೂರ್ನಿಯಿಂದ ಹೊರಬಿತ್ತು. ಆ ಮೂಲಕ 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಫ್ರಾನ್ಸ್ ತಂಡ ವಿಶ್ವಕಪ್ ಫೈನಲ್ ಹಂತಕ್ಕೇರಿತು.
ಸುಳ್ಳಾಯ್ತು ಅಚಿಲ್ಸ್ ಬೆಕ್ಕಿನ ಭವಿಷ್ಯ
ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಭವಿಷ್ಯದ ಮೂಲಕ ಭಾರಿ ಸದ್ದು ಮಾಡಿರುವ ಅಚಿಲ್ಸ್ ಬೆಕ್ಕು ಸೆಮಿ ಫೈನಲ್ ಪಂದ್ಯದ ಕುರಿತು ಭವಿಷ್ಯ ನುಡಿದು ಮತ್ತೆ ಸುದ್ದಿಗೆ ಗ್ರಾಸವಾಗಿತ್ತು. ಸೆಮಿಫೈನಲ್ ನಲ್ಲಿ ಬೆಲ್ಜಿಯಂ ಗೆಲ್ಲಲಿದೆ ಎಂದು ಅಚಿಲ್ಸ್ ಹೇಳಿತ್ತು. ಆದರೆ ಈ ಬಾರಿ ಅಚಿಲ್ಸ್ ಬೆಕ್ಕಿನ ಭವಿಷ್ಯ ಸುಳ್ಳಾಗಿದ್ದು, ಬೆಲ್ಜಿಯಂ ತಂಡ ಸೋತು ಮನೆಯತ್ತ ಮುಖಮಾಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ