ಫಿಫಾ ವಿಶ್ವಕಪ್ 2018: ಇತಿಹಾಸ ನಿರ್ಮಿಸಿದ ತಮಿಳುನಾಡಿನ 11 ವರ್ಷದ ಬಾಲಕಿ

ಸೋಚಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2018ರಲ್ಲಿ ತಮಿಳುನಾಡಿನ 11 ವರ್ಷದ ಬಾಲಕಿಯೊಬ್ಬಳು ಇತಿಹಾಸ ನಿರ್ಮಿಸಿದ್ದಾಳೆ.
ತಮಿಳುನಾಡಿನ ಬಾಲಕಿ ನಥಾನಿಕಾ ಜಾನ್ ಕೆ ಅವರು ಬ್ರೆಜಿಲ್‌ ಮತ್ತು ಕೋಸ್ಟರಿಕಾ ನಡುವಿನ ಪಂದ್ಯದಲ್ಲಿ ಅಧಿಕೃತ ಚೆಂಡನ್ನು ಹಿಡಿದು ಮುನ್ನಡೆಯುವ ಅವಕಾಶ ಪಡೆದಿದ್ದಾಳೆ.
ತಮಿಳುನಾಡಿನ ನೀಲಗಿರಿಸ್ ಮೂಲದ ನಥಾನಿಕಾ ಸ್ವತಃ ಫುಟ್ಬಾಲ್ ಆಟಗಾರ್ತಿಯಾಗಿದ್ದು, ‘ಅಫಿಶಿಯಲ್ ಮ್ಯಾಚ್ ಬಾಲ್ ಕ್ಯಾರಿಯರ್'(ಒಎಂಬಿಸಿ) ಆದ ಮೊದಲ ಭಾರತೀಯ ಬಾಲಕಿ ಎಂಬ ಗೌರವಕ್ಕೆ ಪಾತ್ರಳಾಗಿದ್ದಾಳೆ.
ಇದಕ್ಕು ಮುನ್ನ ಬೆಂಗಳೂರಿನ ಬಾಲಕ ಬೆಲ್ಜಿಯಂ-ಪನಾಮ ನಡುವಿನ ಪಂದ್ಯದ ಅಧಿಕೃತ ಚೆಂಡನ್ನು ಹಿಡಿಯುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಂಡಿದ್ದ.
ಸೋಚಿಯಲ್ಲಿ ನಡೆದ ಬೆಲ್ಜಿಯಂ-ಪನಾಮ ನಡುವಿನ ಪಂದ್ಯದಲ್ಲಿ ಬೆಂಗಳೂರಿನ 10 ವರ್ಷದ ಬಾಲಕ ರಿಷಿ ತೇಜ್ ಅಧಿಕೃತ ಚೆಂಡನ್ನು ಹಿಡಿದು ಮುನ್ನಡೆಯುವ ಗೌರವವನ್ನು ಸ್ವೀಕರಿಸಿದ್ದನು.
ಫಿಫಾ ವಿಶ್ವಕಪ್’ನ ಪ್ರತೀ ಪಂದ್ಯದ ಆರಂಭಕ್ಕೂ ಮುನ್ನ ಇದೇ ರೀತಿ ಒಬ್ಬೊಬ್ಬ ಚಿಣ್ಣರು ಅಂಪೈರ್ ಗಳ ಕೈಗೆ ಚೆಂಡನ್ನು ಹಸ್ತಾಂತರಿಸುತ್ತಾರೆ. ಇದಕ್ಕಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಶ್ವದೆಲ್ಲೆಡೆಯಿಂದ ಒಟ್ಟು 1600 ಮಕ್ಕಳು ಆಯ್ಕೆಗೊಂಡಿದ್ದರು. ಅಂತಿಮವಾಗಿ 64 ಮಕ್ಕಳನ್ನು ಅಂತಿಮಗೊಳಿಸಲಾಗಿತ್ತು. ಕಳೆದ ತಿಂಗಳು ಸುನಿಲ್ ಚೆಟ್ರಿ ನೇತೃತ್ವದಲ್ಲಿ ಗುರುಗ್ರಾಮದಲ್ಲಿ ನಡೆದ ಅಂತಿಮ ಹಂತದ ಆಯ್ಕೆ ಟ್ರಯಲ್ಸ್ ನಲ್ಲಿ ಬೆಂಗಳೂರಿನ ರಿಷಿ ತೇಜ್ ಅವರು ಆಯ್ಕೆಯಾಗಿದ್ದರು.
ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಚೆಂಡು ಹಂಸ್ತಾಂತರಿಸುವವರನ್ನು ‘ಅಫಿಶಿಯಲ್ ಮ್ಯಾಚ್ ಬಾಲ್ ಕ್ಯಾರಿಯರ್’ (ಒಎಂಬಿಸಿ) ಎಂದು ಕರೆಯಲಾಗುತ್ತದೆ. ಫಿಫಾದ ಆಟೋಮೊಟಿವ್ ಪಾಲುದಾರ ‘ಕಿಯಾ ಮೋಟಾರ್ಸ್ ಇಂಡಿಯಾ’ 10 ರಿಂದ 14 ವರ್ಷದೊಳಗಿನ ಭಾರತೀಯ ಫುಟ್ಬಾಲ್ ಆಟಗಾರರಿಗೆ ಇಂತಹ ಅದ್ಬುತ ಅವಕಾಶವನ್ನು ಕಲ್ಪಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ