ಮುಂಬೈ:ಜೂ-26: ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಹಿಟ್ಲರ್’ಗೆ ಹೋಲಿಕೆ ಮಾಡಿದ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಪ್ರಧಾನಿ ಮೋದಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ತುರ್ತು ಪರಿಸ್ಥಿತಿಯ ಭೀಕರ ದಿನಗಳನ್ನು ನೆನೆದು ಜೇಟ್ಲಿಯವರು ಬರೆದಿರುವ ಬರಹವನ್ನು ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣದಲ್ಲಿರುವ ತಮ್ಮ ಖಾತೆಯಲ್ಲಿ ಹಂಚಿಕೆ ಮಾಡಿಕೊಂಡಿದ್ದು, ಈ ಬರಹವನ್ನು ಓದುವಂತೆ ಜನರಿಗೆ ತಿಳಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಜೇಟ್ಲಿಯವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದ ಧೀರ ಮಹಿಳೆ, ಮಹನೀಯರ ಧೈರ್ಯವನ್ನು ಕೊಂಡಾಡಿ ಮೋದಿಯವರು ಟ್ವೀಟ್ ಮಾಡಿದ್ದಾರೆ. ಇದಲ್ಲದೆ, ಪ್ರಜಾಪ್ರಭುತ್ವ ಬಲಿಷ್ಠಗೊಳಿಸಲು ಎಲ್ಲರೂ ಶ್ರಮಿಸಬೇಕಿದೆ. ಚರ್ಚೆ, ಪ್ರಶ್ನೆ ಮಾಡುವುದು ಹಾಗೂ ಬರಹದ ಮೂಲಕ ಪ್ರಜಾಪ್ರಭುತ್ವವನ್ನು ಕಾಪಾಡಬೇಕಿದೆ. ಸಂವಿಧಾನದ ಮೂಲ ಸಿದ್ಧಾಂತಗಳನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.
1975ರ ಜೂನ್ 25ರಂದು ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿವಿಧಿಸಿದ್ದ ತುರ್ತು ಪರಿಸ್ಥಿತಿಗೆ 43 ವರ್ಷಗಳಾಗಿವೆ.
ಸಚಿವ ಅರುಣ್ ಜೇಟ್ಲಿ ಅವರು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರನ್ನು ಜರ್ಮನಿಯ ಸರ್ವಾಧಿಕಾರಿ ಅಡೊಲ್ಫ್ ಹಿಟ್ಲರ್ ಗೆ ಹೋಲಿಸಿದ್ದು, ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವವನ್ನು ಸಾಂವಿಧಾನಿಕ ಸರ್ವಾಧಿಕಾರವಾಗಿ ಪರಿವರ್ತಿಸಿದ್ದರು ಎಂದು ಆರೋಪಿಸಿದ್ದಾರೆ.
1975ರ ಜೂನ್ 25ರಂದು ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತು ತಮ್ಮ ಫೇಸ್ ಬುಕ್ ನಲ್ಲಿ ಸುಧೀರ್ಘವಾಗಿ ಮೂರು ಭಾಗಗಳಲ್ಲಿ ಪ್ರಕಟಿಸುತ್ತಿರುವ ಅರುಣ್ ಜೇಟ್ಲಿ ಅವರು, ಮೊದಲನೇ ಭಾಗವನ್ನು ಭಾನುವಾರ ಹಾಗೂ ಎರಡನೇ ಭಾಗವನ್ನು ಸೋಮವಾರ ಪ್ರಕಟಗೊಳಿಸಿದ್ದಾರೆ. ಮೂರನೇ ಭಾಗ ಪ್ರಕಟವಾಗಬೇಕಾಗಿದ್ದು, ಇದರಲ್ಲಿನ ಪ್ರಮುಖ ಅಂಶಗಳನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಎರಡನೇ ಭಾಗದಲ್ಲಿ ಇಂದಿರಾ ಗಾಂಧಿ ಮತ್ತು ಹಿಟ್ಲರ್ ಸಂವಿಧಾನವನ್ನು ರದ್ದುಗೊಳಿಸಲಿಲ್ಲ. ಅವರು ಪ್ರಜಾಪ್ರಭುತ್ವವನ್ನು ಸರ್ವಾಧಿಕಾರವನ್ನಾಗಿ ರೂಪಿಸಲು ಸಂವಿಧಾನವನ್ನೇ ಬಳಸಿಕೊಂಡಿದ್ದರು ಎಂದು ಜೇಟ್ಲಿ ಉಲ್ಲೇಖಿಸಿದ್ದಾರೆ.
1975ರ ಜೂನ್ 25ರಂದು ಪ್ರತಿಪಕ್ಷಗಳು ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಸಂಚು ಹೂಡಿವೆ ಎಂದು ವಾದಮಾಡಿ, ಸಂವಿಧಾನದ ವಿಧಿ 352ರ ಅಡಿಯಲ್ಲಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಇದು ಹಿಟ್ಲರ್ ಧೋರಣೆಯ ಅನುಕರಣೆಯಾಗಿತ್ತು. ಹಿಟ್ಲರ್ ತನ್ನ ಅಧಿಕಾರದಲ್ಲಿ ಸಂಸತ್ನ ಬಹುತೇಕ ಪ್ರತಿಪಕ್ಷ ನಾಯಕರನ್ನು ಬಂಧಿಸಿ, ಕಡಿಮೆ ಸಂಖ್ಯಾಬಲ ಹೊಂದಿದ್ದ ಸರ್ಕಾರವನ್ನು 2/3 ಬಹುಮತದ ಸರ್ಕಾರವನ್ನಾಗಿ ಪರಿವರ್ತಿಸಿದ್ದು ಇದೇ ರೀತಿ ಇಂದಿರಾ ಗಾಂಧಿಯವರು ಸಂಚು ರೂಪಿಸಿದ್ದರು ಎಂದು ಕೇಂದ್ರ ಸಚಿವರು ತಮ್ಮ ಬರಹದಲ್ಲಿ ಆರೋಪಿಸಿದ್ದಾರೆ.
ಇಂದಿರಾ ಗಾಂಧಿ ಅವರು ಕಾನೂನಿನಲ್ಲಿ ಬದಲಾವಣೆ ಮಾಡುವ ಮೂಲಕ ಅಮಾನ್ಯ ಚುನಾವಣೆಯನ್ನು ಮಾನ್ಯ ಮಾಡುವುದಕ್ಕೋಸ್ಕರ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದಿದ್ದರು. ಭಾರತವನ್ನು ವಂಶಾಡಳಿತಕ್ಕೆ ಒಳಪಡಿಸಲು ಇಂದಿರಾ ಗಾಂಧಿ ಮುಂದಾಗಿದ್ದರು ಎಂದು ಅರುಣ್ ಜೇಟ್ಲಿ ಆರೋಪಿಸಿದ್ದರು.
Emergency, Union Minister Arun Jaitley, PM Narendra Modi, Indira Gandhi,Hitler