ಬೆಂಗಳೂರು:ಜೂ-೨೫: ರಾಜ್ಯದ ರೈತರ ಕಷ್ಟಗಳಿಗೆ ಸ್ಪಂದಿಸಲು ಸಾಲಮನ್ನಾ ಮಾಡುವ ಬಗ್ಗೆ ಮುಂದಾಗಿದ್ದೇನೆಯೇ ಹೊರತು ನನಗೆ ಇದರಿಂದ ಯಾವುದೇ ಕಮಿಷನ್ ಬರುವುದಿಲ್ಲ. ನಾನು ಮುಖ್ಯಮಂತ್ರಿ ಹುದ್ದೆಯನ್ನು ಯಾರಿಂದಲೂ ಭಿಕ್ಷೆ ಬೇಡಿ ಪಡೆದದ್ದಲ್ಲ, ಅಧಿಕಾರ ಅದುವಾಗಿಯೇ ಸಿಕ್ಕಿದ್ದು, ನಾನು ಯಾರ ಹಂಗಿನಲ್ಲಿಯೂ ಇಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಸಾಲಮನ್ನಾ ವಿಚಾರ ಕುರಿತು ಇಂದು ವಿಧಾನಸೌಧದಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ನಾನು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇನೆ. ಸಾಲಮನ್ನಾ ಮಾಡಿ ರೈತರಿಗೆ ಅನುಕೂಲ ಮಾಡುವ ಉದ್ದೇಶ ಹೊಂದಿದ್ದೇನೆಯೇ ಹೊರತು, ನಾನೇನು ಕಮಿಷನ್ ಪಡೆಯುವುದಿಲ್ಲ. ಯಾವ ಸರ್ಕಾರ ಎಷ್ಟೆಷ್ಟು ಕಮಿಷನ್ ತೆಗೆದುಕೊಂಡಿದೆ ಎಂದು ಗೊತ್ತಿದೆ ಎಂದರು.
ಕಳೆದ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್ ನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟ. ಅಂದು ಅಧಿಕಾರದಲ್ಲಿದ್ದ ಸುಮಾರು 100 ಮಂದಿ ಶಾಸಕರು ಮೊನ್ನೆಯ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಿರುವಾಗ ಅಂದು ಅನುಮೋದಿಸಿದ್ದ ಕಾರ್ಯಕ್ರಮಗಳನ್ನು ಇಂದು ಮುಂದುವರಿಸಿಕೊಂಡು ಹೋಗುವುದು ಕಷ್ಟ ಎಂದು ಹೆಚ್ ಡಿ ಕುಮಾರಸ್ವಾಮಿ ಇಂದಿನ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಜೆಟ್ ಮಂಡನೆ ಆಗಬೇಕೋ, ಬೇಡವೋ ಎಂದು ಚರ್ಚೆ ಆಗುತ್ತಿದೆ. ಲೋಕಸಭೆ ಚುನಾವಣೆ ಬಳಿಕ ಬಜೆಟ್ ಮಂಡಿಸಿ ಎನ್ನುತ್ತಿದ್ದಾರೆ. ಈಗಾಗಲೇ ಸಹಕಾರಿ ಬ್ಯಾಂಕ್ಗಳಲ್ಲಿನ 8 ಸಾವಿರ ಕೋಟಿ ಸಾಲಮನ್ನಾ ಆಗಿದೆ. ಇನ್ನೂ 10 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಬೇಕು. ಮುಂದಿನ ಮಾರ್ಚ್ ಅಂತ್ಯದವರೆಗಿನ ಸಾಲಮನ್ನಾಗೆ ಒತ್ತಾಯವಿದೆ. ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿರುವುದರಿಂದ 16,000 ಕೋಟಿ ರೂ. ಹೆಚ್ಚಿನ ಹೊರೆಯಾಗಿದೆ. ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿಯವರು ತಮ್ಮ ಬಜೆಟ್ನ್ನು ಮುಂದುವರಿಸಿ ಎಂದು ಹೇಳುತ್ತಿದ್ದಾರೆ. ನಾನು ಯಾರ ಹಂಗಿನಲ್ಲೂ ಇಲ್ಲ ಎಂದು ತಿರುಗೇಟು ನೀಡಿದರು.
ಹಿಂದಿನ ಸರ್ಕಾರದ ಯೋಜನೆ ಮುಂದುವರಿಸುವ ವಿಚಾರ, ಯಾವುದೇ ಯೋಜನೆ ನಿಲ್ಲಿಸಬಾರದೆಂಬ ತೀರ್ಮಾನ ಆಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕೆಂದು ಗೊತ್ತಿದೆ. ನನ್ನ ಪರಿಸ್ಥಿತಿ ಸೇರಿ ಕೆಲ ವಿಚಾರವನ್ನು ಹೊರಗಡೆ ಹೇಳುವಂತಿಲ್ಲ. ರಾಜ್ಯದ ರೈತರ ಹಿತದೃಷ್ಟಿಯಿಂದ ಸಾಲಮನ್ನಾ ಮಾಡಲು ಮುಂದಾಗಿದ್ದೇನೆಯೋ ಹೊರತು ಇದರಿಂದ ನನಗೆ ವೈಯಕ್ತಿಕ ಲಾಭವೇನೂ ಇಲ್ಲ. ಅಧಿಕಾರದ ದರ್ಪದಿಂದ, ಅಹಂಕಾರದಿಂದ ಮಾತನಾಡಿದ ತಕ್ಷಣ ಏನೂ ಸಿಗುವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
Budget, H D Kumaraswamy, Siddaramaiah