ಅಹ್ಮದಾಬಾದ್:ಜೂ-21: ಪ್ರಧಾನಿ ನರೇಂದ್ರ ಮೋದಿ ಅವಿವಾಹಿತರು ಎಂಬ ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾಬೆನ್ ಅಚ್ಚರಿಯೊಂದಿಗೆ ತಿರುಗೇಟು ನೀಡಿದ್ದಾರೆ.
ಆನಂದಿಬೆನ್ ನೀಡಿರುವ ಹೇಳಿಕೆ ನನಗೆ ಆಶ್ಚರ್ಯವನ್ನುಂಟುಮಾಡಿದೆ. 2014ರ ಲೋಕಸಭೆ ಚುನಾವಣೆಗೆ ಮುನ್ನ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸ್ವತಃ ನರೇಂದ್ರ ಮೋದಿಯವರೇ ತಾವು ವಿವಾಹಿತ ಎಂದು ನನ್ನ ಹೆಸರನ್ನು ನಮೂದಿಸಿದ್ದಾರೆ ಎಂದು ಜಶೋದಾಬೆನ್ ತಿಳಿಸಿದ್ದಾರೆ.
ಒಬ್ಬ ವಿದ್ಯಾವಂತ ಮಹಿಳೆಯಾಗಿ ಆನಂದಿಬೆನ್ ಪಟೇಲ್ ಹೀಗೆ ಹೇಳುವುದು ಸರಿಯಲ್ಲ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ನನಗೆ ಇದು ಸರಿ ಕಾಣುವುದಿಲ್ಲ. ಅವರ ಹೇಳಿಕೆ ಭಾರತದ ಪ್ರಧಾನ ಮಂತ್ರಿಯಾಗಿರುವ ಮೋದಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತದ್ದಾಗಿದೆ. ಅವರು ತುಂಬಾ ಗೌರವಾನ್ವಿತ ವ್ಯಕ್ತಿ. ಅವರು ನನಗೆ ಶ್ರೀರಾಮನಿದ್ದಂತೆ ಎಂದು ಜಶೋದಾಬೆನ್ ಹೇಳಿದ್ದಾರೆ.
ಉತ್ತರ ಗುಜರಾತ್ ನ ಉಂಚಾದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಶೋದಾಬೆನ್ ಸೋದರ ಅಶೋಕ್ ಮೋದಿ, ತಮ್ಮ ಮೊಬೈಲ್ ವಿಡಿಯೊದಲ್ಲಿ ಮಾತನಾಡಿರುವುದು ಜಶೋದಾಬೆನ್ ಎಂದು ಖಚಿತಪಡಿಸಿದ್ದಾರೆ.
ಆನಂದಿಬೆನ್ ಪಟೇಲ್ ಅವರು ಹೀಗೆ ಹೇಳಿದ್ದಾರೆಂದಾಗ ನಾವು ಆರಂಭದಲ್ಲಿ ನಂಬಲಿಲ್ಲ. ಆದರೆ ನಂತರ ದಿವ್ಯ ಭಾಸ್ಕರ ಎಂಬ ಪತ್ರಿಕೆಯ ಮುಖಪುಟದಲ್ಲಿ ಇದು ಜೂನ್ 19ರಂದು ಪ್ರಕಟವಾಯಿತು. ಹೀಗಿರುವಾಗ ತಪ್ಪಾಗಿರಲು ಸಾಧ್ಯವಿಲ್ಲ. ಹೀಗಾಗಿ ನಾವು ಅಕ್ಕ ಜಶೋದಾಬೆನ್ ಆಡಿರುವ ಮಾತುಗಳ ವಿಡಿಯೊವನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಬೇಕಾಯಿತು. ಜಶೋದಾಬೆನ್ ಅವರ ಲಿಖಿತ ಹೇಳಿಕೆಯನ್ನು ಕೂಡ ನಾವು ವಿಡಿಯೊದಲ್ಲಿ ದಾಖಲಿಸಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
PM Narendra Modi, Jashodaben, Anandiben Patel