![mahaghatabandhan](http://kannada.vartamitra.com/wp-content/uploads/2018/06/mahaghatabandhan-654x381.jpg)
ನವದೆಹಲಿ:ಜೂ-18: ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟ ಇನ್ನು ಮುಂದೆ ಪ್ರತೀ ತಿಂಗಳು ಒಗ್ಗಟ್ಟು ಪ್ರದರ್ಶನ ಮಾಡಲು ನಿರ್ಧರಿಸಿದೆ.
ಪ್ರಮುಖವಾಗಿ ಮುಂಬರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಘಡ 3 ರಾಜ್ಯಗಳ ವಿಧಾನಸಭೆ ಚುನಾವಣೆಯಿಂದಲೇ ಈ ತಿಂಗಳಿಗೊಂದು ಮಹಾಸಮಾವೇಶ ಮಾಡಲು ಮಹಾಮೈತ್ರಿಕೂಟ ನಿರ್ಧರಿಸಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೆಂಬಲಕ್ಕೆ ನಿಂತಿದ್ದ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳೂ ಕೂಡ ಈ ಮಹಾಮೈತ್ರಿಕೂಟದ ಸಮಾವೇಶದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಯೋಜಿಸಿದ್ದ ಇಫ್ತಾರ್ ಕೂಟದ ವೇಳೆ ಮಹಾಮೈತ್ರಿಕೂಟದ ಬಹುತೇಕ ಎಲ್ಲ ನಾಯಕರೂ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲೇ 2019ರ ಲೋಕಸಭಾ ಚುನಾವಣೆಗಾಗಿ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲಾಗಿತ್ತು. ಅದರಂತೆ ಇದೀಗ ಪ್ರತೀ ತಿಂಗಳಿಗೊಂದರಂತೆ ಮಹಾಸಮಾವೇಶ ಆಯೋಜಿಸಲು ಮೈತ್ರಿ ಕೂಟ ಮುಂದಾಗಿದೆ.
ತಾಜ್ ಪ್ಯಾಲೆಸ್ ನಲ್ಲಿ ಇಫ್ತಾರ್ ಪಾರ್ಟಿ ಬಳಿಕ ಎಸ್ ಪಿ ಮುಖಂಡ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಲಖನೌನಲ್ಲಿ ಮಹಾಮೈತ್ರಿಕೂಟದ ಒಗ್ಗಟ್ಟು ಪ್ರದರ್ಶನವಾಗಲಿದೆ. ಈ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಮಹಾಮೈತ್ರಿಕೂಟದ ಬಹುತೇಕ ನಾಯಕರು ಆಗಮಿಸಲಿದ್ದಾರೆ. ಇದಲ್ಲದೆ ವಿಪಕ್ಷಗಳ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೂ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದಲ್ಲದೆ ಬಿಹಾರದ ಜೆಡಿಯು ಪಕ್ಷದ ರೆಬೆಲ್ ಮುಖಂಡ ಶರದ್ ಯಾದವ್ ಕೂಡ ಪಾಲ್ಗೊಳ್ಳಲ್ಲಿದ್ದಾರೆ.
Lokasabha election,mahaghatabandhan,Congress