ಫುಟ್ ಬಾಲ್ ದಂತಕಥೆ ಸೂಪರ್ ಸ್ಟಾರ್ ಲಿಯೊನೆಲ್‌ ಮೆಸ್ಸಿಗೆ ಇದು ‘ಲಾಸ್ಟ್ ಚಾನ್ಸ್’

ಮಾಸ್ಕೋ: ಫುಟ್ ಬಾಲ್ ಕ್ಷೇತ್ರದ ದಂತಕಥೆ, ಅರ್ಜೆಂಟೀನಾ ತಂಡದ ಸ್ಟ್ರೈಕರ್ ಸೂಪರ್ ಸ್ಟಾರ್ ಲಿಯೊನೆಲ್‌ ಮೆಸ್ಸಿಗೆ ಹಾಲಿ ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕವಾಗಿದ್ದು, ಇದು ಅವರ ಕೊನೆಯ ವಿಶ್ವಕಪ್ ಟೂರ್ನಿ ಎಂದು ಹೇಳಲಾಗುತ್ತಿದೆ.
30 ವರ್ಷದ ಲಿಯೊನೆಲ್‌ ಮೆಸ್ಸಿ ಮುಂದಿನ ವಿಶ್ವಕಪ್ ಟೂರ್ನಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದ್ದು, ತಾವು ಪ್ರತಿನಿಧಿಸುತ್ತಿರುವ ದೇಶಕ್ಕಾಗಿ ತಮ್ಮ ಕಡೆಯಿಂದ ಒಂದು ವಿಶ್ವಕಪ್ ಗೆದ್ಜುಕೊಡುವ ಹಂಬಲ ಲಿಯೊನೆಲ್‌ ಮೆಸ್ಸಿಯದ್ದು, ಹೀಗಾಗಿ ರಷ್ಯಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶತಾಯಗತಾಯ ತಂಡವನ್ನು ಜಯದ ಹಾದಿಯಲ್ಲಿ ನಡೆಸಬೇಕಾದ ಜವಾಬ್ದಾರಿ ಮೆಸ್ಸಿ ಮೇಲಿದೆ. ದೇಶೀಯ ಟೂರ್ನಿಗಳಲ್ಲಿ ಬಾರ್ಸಿಲೋನಾ ಫುಟ್ ಬಾಲ್ ಕ್ಲಬ್ ತಂಡದ ಪರ ಆಡಿರುವ ಮೆಸ್ಸಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆಯಾದರೂ ಇದೇ ಯಶಸ್ಸು ರಾಷ್ಟ್ರೀಯ ತಂಡದಿಂದ ಬಂದಿಲ್ಲ.
ಈ ಹಿಂದೆ ಮೂರು ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಮೆಸ್ಸಿ ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸಿ ಫೈನಲ್ ಕೂಡ ತಂಡವನ್ನು ಮುನ್ನಡೆಸಿದ್ದರು.2014ರ ವಿಶ್ವಕಪ್ ಟೂರ್ನಿ, 2015 ಮತ್ತು 2016ರಲ್ಲಿ ಸತತ 2 ಬಾರಿ ಕೋಪಾ ಅಮೆರಿಕನ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡ ಫೈನಲ್ ಪ್ರವೇಶ ಮಾಡಿತ್ತು. ಆದರೆ ಪ್ರಶಸ್ತಿಗಳಿಸುವಲ್ಲಿ ವಿಫಲವಾಗಿತ್ತು.
ಈ ಬಗ್ಗೆ ಖಾಸಗಿ ಫುಟ್ ಬಾಲ್ ವೆಬ್ ಸೈಟ್ ನೊಂದಿಗೆ ಭಾವುಕರಾಗಿ ಅಭಿಪ್ರಾಯ ಹಂಚಿಕೊಂಡಿರುವ ಮೆಸ್ಸಿ, ನಾನು ಸಾಕಷ್ಚು ಬಾರಿ ಅತ್ತಿದ್ದೇನೆ. ಈ ಕ್ರೀಡೆ ಇರುವುದೇ ಹಾಗೆ. ಫೈನಲ್ ಗಳಲ್ಲಿನ ಸೋಲು ಸಾಕಷ್ಟು ಬಾರಿ ನನ್ನ ಕಂಗೆಡಿಸಿದೆ. ದೇಶಕ್ಕಾಗಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಇನ್ನು ನನ್ನಲಿದೆ. ಪ್ರತೀ ಬಾರಿ ವಿಶ್ವಕಪ್ ಟೂರ್ನಿ ಬಂದಾಗ ನನ್ನಲ್ಲಿ ಹೊಸ ಚೈತನ್ಯ ಮೂಡುತ್ತದೆ. ವಿಶ್ವಕಪ್ ಎತ್ತಿಹಿಡಿಯುವ ಕನಸು ನನ್ನಲ್ಲೂ ಇದೆ ಎಂದು ಹೇಳಿದ್ದಾರೆ.
ಐದು ಬಾರಿ ಬ್ಯಾಲನ್ ಡಿಒರ್ ಪ್ರಶಸ್ತಿಗೆ ಪಾತ್ರರಾಗಿರುವ ಮೆಸ್ಸಿ, ಇದೇ ಜೂನ್ ನಲ್ಲಿ 31ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇನ್ನು ಮೆಸ್ಸಿ ಪ್ರತಿನಿಧಿಸುತ್ತಿರುವ ಅರ್ಜೆಂಟೀನಾ ತಂಡ ಐಲ್ಯಾಂಡ್, ಕ್ರೊವೇಷಿಯಾ ಮತ್ತು ನೈಜಿರಿಯಾ ತಂಡಗಳನ್ನು ತನ್ನ ಗ್ರೂಪ್ ಸ್ಟೇಜ್ ಹಂತದಲ್ಲಿ ಎದುರಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ