‘ವಿದೇಶಿಗರೊಂದಿಗೆ ಸೆಕ್ಸ್ ಬೇಡ’: ರಷ್ಯಾ ಸಚಿವರಿಂದ ಯುವತಿಯರಿಗೆ ಎಚ್ಚರಿಕೆ

ಮಾಸ್ಕೋ: ಫೀಫಾ ವಿಶ್ವಕಪ್ 2018ರ ಟೂರ್ನಿ ಆರಂಭವಾಗಿರುವಂತೆಯೇ ವಿದೇಶಿಗರೊಂದಿಗೆ ಸೆಕ್ಸ್ ಮಾಡಬೇಡಿ ಎಂದು ರಷ್ಯಾ ಸಚಿವೆ ತಮಾರಾ ಪ್ಲೆಟ್ನೋವಾ ತಮ್ಮ ದೇಶದ ಯುವತಿಯರಿಗೆ ಮತ್ತು ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ.
ಫೀಫಾ ಫುಟ್ಬಾಲ್ ವಿಶ್ವಕಪ್ 2018ರ ಟೂರ್ನಿ ಚಾಲನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೂರ್ನಿ ಆಯೋಜಿಸುತ್ತಿರುವ ರಷ್ಯಾದಲ್ಲಿ ಸಾಕಷ್ಟು ವಾದ-ವಿವಾದಗಳು ಕೇಳಿಬರುತ್ತಿದ್ದು, ಪ್ರಮುಖವಾಗಿ ಫೀಫಾ ವಿಶ್ವಕಪ್ ಟೂರ್ನಿ ವೇಳೆ ರಷ್ಯಾಗೆ ಆಗಮಿಸುವ ವಿದೇಶಿ ಪುರುಷರೊಂದಿಗೆ ಸೆಕ್ಸ್ ಮಾಡಬೇಡಿ. ಒಂದು ವೇಳೆ ಆ ತಪ್ಪು ನೀವು ಮಾಡಿದರೆ ನಿಮ್ಮ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ. ವಿದೇಶಗಳಲ್ಲಿ ನಿಮ್ಮ ಮಕ್ಕಳು ತಾರತಮ್ಯ ಅಥಪಾ ಪಕ್ಷಪಾತ ಅನುಭವಿಸಬೇಕಾಗುತ್ತದೆ ಎಂದು ರಷ್ಯಾ ಸಚಿವರೊಬ್ಬರು ಹೇಳಿದ್ದಾರೆ.
ರಷ್ಯಾದ ಕುಟುಂಬ, ಮಹಿಳೆಯರು ಮತ್ತು ಮಕ್ಕಳ ಇಲಾಖೆಯ ಸಂಸತ್ ಸಮಿತಿಯ ಮುಖ್ಯಸ್ಥರಾಗಿರುವ ತಮಾರಾ ಪ್ಲೆಟ್ನೋವಾ ಇಂತಹುದೊಂದು ಎಚ್ಚರಿಕೆ ನೀಡಿದ್ದಾರೆ. ‘ರಷ್ಯಾ ಯುವತಿಯರು ವಿದೇಶಿ ಪುರುಷರನ್ನು ಮದುವೆಯಾದರೆ ಅವರ ದಾಂಪತ್ಯ ಜೀವನ ಮುರಿದು ಬೀಳುತ್ತದೆ. ಅವರ ಮಕ್ಕಳು ವಿದೇಶಗಳಲ್ಲಿ ಅನಾಥರಾಗಿ ಜೀವನ ನಡೆಸಬೇಕಾಗುತ್ತದೆ. ಆ ದೇಶಗಳಿಂದ ತಾರತಮ್ಯ ಎದುರಿಸಬೇಕಾಗುತ್ತದೆ. ಅನಿವಾರ್ಯವಾದರೂ ತಮ್ಮದೇ ಮಕ್ಕಳನ್ನು ವಾಪಸ್ ಕರೆತರಲು ಆ ಮಹಿಳೆಯರು ಕಷ್ಟ ಪಡಬೇಕಾಗುತ್ತದೆ ಎಂದು ಹೇಳಿದ್ದಾರೆ.
‘1980ರ ಮಾಸ್ಕೋ ಕ್ರೀಡಾಕೂಟ ಇನ್ನೂ ನಮ್ಮ ಮುಂದಿದೆ. ಅಂದು ವಿಶ್ವದಲ್ಲಿ ಅಷ್ಟಾಗಿ ಕಾಂಡೋಮ್ ಗಳ ಬಗ್ಗೆ ಮಾಹಿತಿ ಇರಲಿಲ್ಲ. ಅಂದು ರಷ್ಯನ್ ಮಹಿಳೆಯರು ಮತ್ತು ವಿದೇಶಿ ಪುರುಷರ ಮಕ್ಕಳು ತಾರತಮ್ಯ ಅನುಭವಿಸುವಂತಾಗಿತ್ತು. ಪ್ರಮುಖವಾಗಿ ಆಫ್ರಿಕಾ, ಲ್ಯಾಟಿನ್ ಅಮೆರಿಕ ಅಥವಾ ಏಷ್ಯಾ ಪುರುಷರೊಂದಿಗೆ ರಷ್ಯನ್ ಮಹಿಳೆಯರು ಸಂಪರ್ಕ ಸಾಧಿಸಿದ್ದರಿಂದ ಇಂದಿಗೂ ಅವರ ಮಕ್ಕಳು ಕಷ್ಟಪಡುವಂತಾಗಿದೆ. ಸೋವಿಯತ್ ಸಮಯದಿಂದಲೂ ಈ ಅಕ್ರಮ ಸಂಪರ್ಕ ಸಮಸ್ಯೆ ಇದ್ದು, ನಾವು ನಮ್ಮದೇ ಮಕ್ಕಳಿಗೆ ಮಾತ್ರ ಜನ್ಮ ನೀಡಬೇಕು’.
ನಾನೇನು ರಾಷ್ಟ್ರೀಯ ವಾದಿಯಲ್ಲ. ಆದರೆ ಈ ಅಕ್ರಮ ಸಂಪರ್ಕ ಸಮಸ್ಯೆಯನ್ನು ಹತ್ತಿರದಿಂದ ಕಂಡಿದ್ದೇನೆ. ಹೀಗಾಗಿ ರಷ್ಯನ್ ಮಹಿಳೆಯರು ಜನಾಂಗೀಯತೆಗೆ ವಿರುದ್ಧವಾಗಿ ವಿದೇಶಿ ಪುರುಷರ ಸಂಪರ್ಕ ಬೆಳೆಸಬಾರದು ಎಂದು ತಮಾರಾ ಪ್ಲೆಟ್ನೋವಾ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ