ಹೆದ್ದಾರಿ ವಿಸ್ತರಣೆಗೆ 1300 ಮರ ಬಲಿ!

ಕಾರವಾರ: ಉಡುಪಿಯ ಕುಂದಾಪು ರದಿಂದ ಕಾರವಾರದ ಗಡಿ ಭಾಗದ ವರೆಗಿನ 189 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಯೋಜನೆಗೆ, ಜಿಲ್ಲೆಯ ಗಂಗಾವಳಿ ಸೇತುವೆಯಿಂದ ಮಾಜಾಳಿಯವರೆಗೆ 1,300 ಮರಗಳು ಬಲಿಯಾಗಿವೆ.
ಕೇರಳದಿಂದ ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ನ್ನು (ಮೊದಲು 17) ಚತುಷ್ಪಥಗೊಳಿಸುವ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕೈಗೆತ್ತಿಕೊಂಡಿದೆ. ಈ ರಸ್ತೆ ವಿಸ್ತರಣೆಗೂ ಮುನ್ನ ಜಿಲ್ಲೆಯ ಕರಾವಳಿ ಭಾಗದ ಹೆದ್ದಾರಿ ಬದಿಯಲ್ಲಿ ಸಾವಿರಾರು ಮರಗಳು ಇದ್ದವು. ಆದರೆ, ಅವೆಲ್ಲವೂ ಈಗ ಕಣ್ಮರೆಯಾಗಿವೆ.
2014ರ ಮಾರ್ಚ್‌ನಲ್ಲಿ ಆರಂಭ ಗೊಂಡ ₹1,686 ಕೋಟಿ ವೆಚ್ಚದ ಕಾಮಗಾರಿಯು ನಿಗದಿಯಂತೆ 2016ರ ಡಿಸೆಂಬರ್‌ನಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಹಾಗೂ ಇನ್ನಿತರ ಕಾರಣಗಳಿಂದ ಕಾಮಗಾರಿ ಆಮೆವೇಗದಲ್ಲಿ ಸಾಗಿದ್ದು, ಈವರೆಗೂ ಪೂರ್ಣಗೊಂಡಿಲ್ಲ.

ಹಸಿರು ಚಪ್ಪರ ಕಣ್ಮರೆ: ‘ಒಂದೈದು ವರ್ಷದ ಹಿಂದಕ್ಕೆ ಹೋಗಿ. ಜಿಲ್ಲೆಯ ಕರಾವಳಿಯ ರಸ್ತೆಗಳ ಬದಿಯ ಎರಡೂ ಕಡೆ ಮರಗಳ ರೆಂಬೆ, ಕೊಂಬೆ ರಸ್ತೆಗೆ ಬಾಗಿ ಹಸಿರಿನ ಚಪ್ಪರಗಳು ಹೊದ್ದು ಮಲಗಿರುತ್ತಿದ್ದವು. ಇದರ ನಡುವಿನ ಸಂಚಾರ ಪ್ರಯಾಣಿಕರಿಗೆ, ವಾಹನ ಸಂಚಾರರಿಗೆ ಉಲ್ಲಾಸ ನೀಡುತ್ತಿತ್ತು. ಅಂಥ 50– 60 ವರ್ಷಗಳ ಹಿಂದಿನ ಮರಗಳು ಇಂದು ಹೆದ್ದಾರಿಗಾಗಿ ನೆಲಸಮಗೊಂಡಿವೆ. ಹೀಗಾಗಿ, ಬಿಸಿಲು ನೇರವಾಗಿ ರಸ್ತೆಗೆ ಬೀಳಲು ಆರಂಭಿಸಿದೆ. ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯವಾಗಿದ್ದು, ಮಳೆಯೂ ಬರುತ್ತಿಲ್ಲ’ ಎಂದು ದೂರುತ್ತಾರೆ ಹಿರಿಯರೊಬ್ಬರು.
ಒಂದಕ್ಕೆ ಹತ್ತು: ‘ಒಂದು ಮರವನ್ನು ಕಡಿದಲ್ಲಿ ಅದಕ್ಕೆ ಬದಲಾಗಿ 10ು ಮರ ಬೆಳೆಸಬೇಕು ಎಂದು ಆದೇಶವಿದೆ. ಹೆದ್ದಾರಿಗಾಗಿ ನೂರಾರು ವರ್ಷದ ಇತಿಹಾಸ ಹೊಂದಿದ್ದ ಮರಗಳು ಕೂಡ ಬಲಿಯಾಗಿವೆ. ಅದಕ್ಕೆ ಇಲಾಖೆಗೂ ಬಹಳ ಬೇಸರ ಉಂಟಾಗಿದೆ. ಒಂದು ಗಿಡ ಬೆಳೆದು ಅದು ತಂಪು ನೀಡಲು ಅನೇಕ ವರ್ಷಗಳೇ ಬೇಕು. ಹೀಗಿರುವಾಗ ನೈಸರ್ಗಿಕವಾಗಿ ಬೆಳೆದ ಮರಗಳನ್ನೇ ಹೆದ್ದಾರಿಗಾಗಿ ಧರೆಗುಳಿಸಲಾಯಿತು’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಗಣಪತಿ.
ಪ್ರಾಧಿಕಾರಕ್ಕೆ ಮನವಿ: ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇಲಾಖೆಯಿಂದ ಮನವಿಯೊಂದನ್ನು ಮಾಡಲಾಗಿದೆ. ರಸ್ತೆ ಪಕ್ಕದ ಎರಡೂ ಬದಿಯಲ್ಲಿ ಮತ್ತೆ ಗಿಡಗಳನ್ನು ನೆಡಲು ಕೋರಿದ್ದೇವೆ. ರಸ್ತೆ ಮಧ್ಯದ ವಿಭಜಕದಲ್ಲಿ ಬೆಳೆ ಸುವ ಹೂವಿನ ಗಿಡಗಳಿಂದ ನೆರಳು ಸಿಗುವುದಿಲ್ಲ. ಹೀಗಾಗಿ, ಈ ಮನವಿ ಮಾಡಿಕೊಂಡಿದ್ದು, ಅವರು ಈ ತಿಂಗ ಳಿನಿಂದಲೇ ಅದಕ್ಕೆ ಚಾಲನೆ ನೀಡುವ ಭರವಸೆ ಇದೆ’ ಎನ್ನುತ್ತಾರೆ.
ಬೆಳೆಯುತ್ತಿರುವ 600 ಸಸಿಗಳು
ಕಳೆದ ವರ್ಷದ ಪರಿಸರ ದಿನಾಚರಣೆಯ ಅಂಗವಾಗಿ ಬೈತಖೋಲ್ ಬಂದರಿನಿಂದ ಕಾಳಿ ನದಿ ಸೇತುವೆಯವರೆಗಿನ ಹೆದ್ದಾರಿಯ ಎರಡೂ ಬದಿಯಲ್ಲಿ ಸುಮಾರು 600 ಗಿಡಗಳನ್ನು ನೆಟ್ಟಿದ್ದೆವು. ಅವು ಬೆಳೆಯುತ್ತಿವೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಡಿಎಫ್ಒ ಕೆ.ಗಣಪತಿ. ಹೆಚ್ಚಿನ ಪೋಷಣೆಯನ್ನು ಮಾಡಿಲ್ಲ. ಹಾಗೆಂದು ಅವುಗಳನ್ನು ಹಾಗೇ ಬಿಟ್ಟಿರ ಲಿಲ್ಲ. ಅದರ ರಕ್ಷಣೆಗೆ ಸುತ್ತ ಬೇಲಿಗಳನ್ನು ಹಾಕಲಾಗಿತ್ತು. ಮುಂದೆ ಅದು ರಸ್ತೆಯಲ್ಲಿ ನೆರಳು ನೀಡಲಿದೆ ಎನ್ನುತ್ತಾರೆ ಅವರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ