ಬಾವಿಗೆ ಬಿದ್ದ ಕಾಡುಕೋಣ ಕೊನೆಗೂ ಬಚಾವ್‌!

ಸಾಗರ: ನೀರನ್ನು ಅರಸುತ್ತ ಕಾಡಿನಿಂದ ಬಂದ ಕಾಡುಕೋಣವೊಂದು ತೋಟದಲ್ಲಿದ್ದ ತೆರೆದ ಬಾವಿಯಲ್ಲಿ ಬಿದ್ದಿದ್ದು, ಗ್ರಾಮಸ್ಥರು ಇದನ್ನು ರಕ್ಷಿಸಿದ್ದಾರೆ. ತಾಲೂಕಿನ ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ತುಂಬೆಯ ಚಂದ್ರಶೇಖರ ಭಟ್‌ ಅವರ ಅಡಕೆ ತೋಟಕ್ಕೆ ಶುಕ್ರವಾರ ಸಂಜೆ ಬಂದ ಕಾಡುಕೋಣ ಬಾವಿಗೆ ಬಿದ್ದಿದ್ದು ಹೊರಬರಲಾರದೆ ಒದ್ದಾಡಿದ್ದು, ಕೊನೆಗೂ ಶನಿವಾರ ಗ್ರಾಮಸ್ಥರಿಂದ ರಕ್ಷಿಸಲ್ಪಟ್ಟು ಕಾಡಿಗೆ ತೆರಳಿದೆ.

ತೋಟಕ್ಕೆ ಬಂದ ಕೋಣ ನೆಲಮಟ್ಟದವರೆಗೆ ನೀರಿನಿಂದ ತುಂಬಿದ್ದ ಬಾವಿಗೆ ಬಗ್ಗಿದೆ. ಈ ಸಂದರ್ಭದಲ್ಲಿ ಕಾಲುಜಾರಿ ನೀರಿಗೆ ಬಿದ್ದಿದೆ. ಮಳೆಯ ಕಾರಣ ಬಾವಿಯ ಸುತ್ತಲಿನ ಮಣ್ಣು ಸಂಪೂರ್ಣ ಜಾರುತ್ತಿದೆ. ಹೀಗಾಗಿ ಕೋಣ ಬಾವಿಯಿಂದ ಮೇಲೆ ಹತ್ತಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಈ ಹಂತದಲ್ಲಿ ಕಕ್ಕಾಬಿಕ್ಕಿಯಾದ ಕೋಣ ನೀರಿನಲ್ಲಿ ಭುಸುಗುಡುತ್ತ ಅಲ್ಲಿಯೇ ಇದೆ.

ಬಾವಿಗೆ ಬಿದ್ದು 12 ತಾಸಿಗೂ ಹೆಚ್ಚು ಸಮಯ ನೀರಲ್ಲಿ ಜೀವ ಉಳಿಸಿಕೊಳ್ಳುವ ಹೋರಾಟದಲ್ಲಿದ್ದ ಕಾಡುಕೋಣ ಶನಿವಾರ ತೋಟದ ಮಾಲೀಕರ ಕಣ್ಣಿಗೆ ಬಿದ್ದಿದೆ. ತಕ್ಷಣ ಊರವರು ಸ್ಥಳಕ್ಕೆ ಧಾವಿಸಿದ್ದಾರೆ. ಅರಣ್ಯ ಇಲಾಖೆಗೂ ಕರೆ ಹೋಗಿದೆ. ಈ ನಡುವೆ ಗ್ರಾಮದವರು ಕೋಣ ಮೇಲಕ್ಕೆ ಹತ್ತಿ ಬರಲು ಸಹಾಯ ಆಗುವಂತೆ ಬಾವಿಗೆ ಸಮನಾಗಿ ಪಕ್ಕದಲ್ಲೇ ಅಗೆದು ದಾರಿ ಮಾಡಿದ್ದಾರೆ.

ಆನಂತರ ಕೋಣ ಅಲ್ಲಿಂದ ಕಾಲ್ಕಿತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಕೋಣವನ್ನು ರಕ್ಷಿಸುವ ಕೆಲಸದಲ್ಲಿ ತುಂಬೆಯ ನವನೀತ್‌ ಹೆಗಡೆ, ದಿನೇಶ್‌ ಚೌಡೀಮನೆ, ವೆಂಕಟೇಶ್‌, ಗಣಪತಿ, ಗೋಪಾಲ ಮತ್ತಿತರರು ಕೈ ಜೋಡಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ