ನವದೆಹಲಿ:ಮಾ-17: ಬಿಜೆಪಿಯ ಅಧಿಕಾರದ ಆಟ ಮತ್ತು ಬೆದರಿಕೆಗಳಿಗೆ ಮಣಿಯದೆ ಕಾಂಗ್ರೆಸ್ ಕಾರ್ಯಕರ್ತರು ‘ಸರ್ವಾಧಿಕಾರ’ ಮತ್ತು ‘ಅಸಹಿಷ್ಣುತೆಯ’ ನಡವಳಿಕೆಗೆ ಉತ್ತರಿಸಬೇಕು ಎಂದು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.
ಪಕ್ಷದ 84ನೇ ಮಹಾಧಿವೇಶನ ಉದ್ದೇಶಿಸಿ ಮಾತನಾಡಿದ ಸೋನಿಯಾಗಾಂಧಿ ಬಿಜೆಪಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಎಂಬುದು ಒಂದು ರಾಜಕೀಯ ಅವಧಿಯಲ್ಲ, ಅದೊಂದು ಆಂದೋಲನ. ಜನರಿಂದ ಮಾನ್ಯತೆ ಪಡೆದ ಪಕ್ಷವಿದು. ನಮ್ಮ ಅಸ್ತಿತ್ವವನ್ನೇ ಅಳಿಸಿಹಾಕಲು ಹೊರಟವರಿಗೆ ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಚುನಾವಣೆಗಳ ಫಲಿತಾಂಶ ಒಂದು ಪಾಠ. ಜನತೆಗೆ ಇನ್ನೂ ಕಾಂಗ್ರೆಸ್ ಬಗ್ಗೆ ಗೌರವವಿದೆ ಎಂಬುದು ಅವರಿಗೆ ತಿಳಿದಿಲ್ಲ ಎಂದರು.
ಬಿಜೆಪಿ ‘ಅಹಂಕಾರ ಮತ್ತು ಅಧಿಕಾರ ದಾಹ’ದ ವಿರುದ್ಧ ಕರ್ನಾಟಕದ ಜನತೆ ಉತ್ತರ ನೀಡಲಿದ್ದಾರೆ; ಬಳಿಕ ದೇಶಾದ್ಯಂತ ಜನತೆ ಉತ್ತರಿಸಲಿದ್ದಾರೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್, ನಾ ಖಾವೂಂಗಾ, ನಾ ಖಾನೇ ದೂಂಗಾ..’ ಎಂದು ಘೋಷಣೆ ಮಾಡಿದರು. ಆದರೆ ಇವೆಲ್ಲ ಮತ ಗಳಿಸುವ ತಂತ್ರಗಳಾಗಿವೆ ಹೊರತು ಬೇರೇನೂ ಆಗಿಲ್ಲ. ಬಿಜೆಪಿಯು ‘ಕಾಂಗ್ರೆಸ್‌ಮುಕ್ತ ಭಾರತ’ಕ್ಕಾಗಿ ಕೆಲಸ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷ ನಾಶಪಡಿಸಲು ಏನೂ ಬೇಕೋ ಎಲ್ಲಾ ಮಾಡಿದೆ. ಆದರೆ. ಕಾಂಗ್ರೆಸ್ ಪಕ್ಷವನ್ನು ಎಂದಿಗೂ ನಾಶಪಡಿಸಲು ಸಾಧ್ಯವಿಲ್ಲ. ನಾಗರಿಕರಿಗೆ ಕಾಂಗ್ರೆಸ್‌ಮುಕ್ತ ಭಾರತ ಬೇಕಾಗಿಲ್ಲ, ಅವರಿಗೆ ಬೇಕಿರುವುದು ಭ್ರಷ್ಟಾಚಾರ ಮತ್ತು ದ್ವೇಷಮುಕ್ತ ಭಾರತ ಎಂದು ಹೇಳಿದರು.
ಸವಾಲಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿದ್ದು, 40 ವರ್ಷದ ಹಿಂದೆ ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಗೆದ್ದು ಬಂದ ನಂತರ ದೇಶದ ರಾಜಕೀಯವೇ ಬದಲಾಯಿತು. ಅಂತಹ ಸಾಧನೆಯನ್ನು ಪಕ್ಷ ಮತ್ತೊಮ್ಮೆ ಮಾಡಬೇಕಿದೆ ಎಂದರು. ಈಗಷ್ಟೇ ಹೊಸ ಅಧ್ಯಾಯದ ಪ್ರಾರಂಭವಾಗಿದ್ದು, ಎಂತಹ ಸವಾಲು ಬೇಕಿದ್ದರೂ ಎದುರಿಸಲು ಎಲ್ಲಾರೂ ಸಿದ್ಧರಾಗಬೇಕು. ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶವನ್ನು ಭ್ರಷ್ಟಾಚಾರ ಹಾಗೂ ಹಗೆತನದಿಂದ ಮುಕ್ತಗೊಳಿಸಬೇಕು.ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದರು.