ನವದೆಹಲಿ:ಮಾ-11: ಪ್ರತ್ಯೇಕ ನಾಡಧ್ವಜ ಹೊಂದಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮತ್ತೆ ಹಿನ್ನಡೆಯಾಗಿದೆ. ವಿಶೇಷ ಸ್ಥಾನಮಾನ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಹೊರಪಡಿಸಿದರೆ, ಉಳಿದ ಯಾವ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ತಜ್ನರ ಸಮಿತಿ ನೀಡಿದ್ದ ಮೂರುಬಣ್ಣಗಳಿಂದ ಕೂಡಿದ್ದ ಹಾಗೂ ರಾಜ್ಯ ಲಾಂಛನವನ್ನು ಒಳಗೊಂಡ ಪ್ರತ್ಯೇಕ ನಾಡಧ್ವಜ ಅನಾವರಣಗೊಳಿಸಿದ್ದರು. ಈ ಧ್ವಜವನ್ನು ಕೇಂದ್ರ ಸರ್ಕಾರದ ಅಂಗೀಕಾರಕ್ಕೆ ಕಳಿಸಲಾಗುವುದು ಎಂದೂ ತಿಳಿಸಿದ್ದರು.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು, ಧ್ವಜ ಸಂಹಿತೆ ಹಾಗೂ ಭಾರತದ ರಾಜ್ಯ ಲಾಂಛನ ನಿಯಮ ಕಾಯ್ದೆಯಲ್ಲಿ ಕೇವಲ ತ್ರಿವರ್ಣ ಧ್ವಜದ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ. ಬೇರಾವ ಧ್ವಜದ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ಪರಿಚ್ಛೇದದ ಪ್ರಕಾರ ವಿಶೇಷ ಸ್ಥಾನಮಾನದ ಸೌಲಭ್ಯವಿದೆ. ಹೀಗಾಗಿ ಆ ರಾಜ್ಯವು ತನ್ನದೇ ಆದ ಧ್ವಜ ಹೊಂದಲು ಅವಕಾಶವಿದೆ. ಆದರೆ, ಇತರೆ ರಾಜ್ಯಗಳಿಗಿಲ್ಲ. ನಾಳೆ ವಿವಿಧ ರಾಜ್ಯಗಳು, ಜಿಲ್ಲೆಗಳು, ಗ್ರಾಮಗಳು ತಮ್ಮದೇ ಧ್ವಜ ಹೊಂದಲು ಆರಂಭಿಸಿದರೆ ದೇಶದಲ್ಲಿ ಅರಾಜಕತೆ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಕೆಲ ಅಧಿಕಾರಿಗಳು ಹೇಳುವ ಪ್ರಕಾರ ಪ್ರತ್ಯೇಕ ಧ್ವಜಕ್ಕೆ ಅವಕಾಶವಿಲ್ಲ. ನಮ್ಮದು ಒಂದು ದೇಶ, ಒಂದು ಧ್ವಜ. ಹೀಗಿರುವಾಗ ಪ್ರತ್ಯೇಕ ರಾಜ್ಯ ಧ್ವಜ ಸರಿಯಲ್ಲ. ಇನ್ನು ಪ್ರತ್ಯೇಕ ನಾಡಧ್ವಜದ ಬಗ್ಗೆ ಕರ್ನಾಟಕ ಸರ್ಕಾರದಿಂದ ನಮಗೆ ಯಾವುದೇ ಪ್ರಸ್ತಾಪ ಬಂದಿಲ್ಲದಿರುವುದರಿಂದ ಈಗಲೇ ಪ್ರತಿಕ್ರಿಯೆ ನೀಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Karnataka, Separate flag,central government,No precedent of any state having separate flag