ಮಂಗಳೂರು: ರಾಜ್ಯ ರಾಜಕಾರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರ ಧ್ವನಿ ಎಂದು ಹೇಳಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, `ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ, ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯುತ್ತೇನೆ’ ಎಂದು ನಳಿನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಸಚಿವರಿಬ್ಬರ ಹೆಸರನ್ನು ಉಲ್ಲೇಖಿಸಿ ಅವರನ್ನು ಕೈಬಿಡಲಾಗುವುದು, ಹೊಸ ತಂಡ ರಚಿಸುತ್ತಿದ್ದೇವೆ. ಯಾರಲ್ಲೂ ಹೇಳಬೇಡಿ. ಮೂರು ಹೆಸರುಗಳಿವೆ.
ಅದರಲ್ಲಿ ಯಾರೂ ಆಗಬಹುದು. ಎಲ್ಲವೂ ದಿಲ್ಲಿಯಿಂದಲೇ ಆಗುತ್ತದೆ ಎಂದು ತುಳು ಭಾಷೆಯಲ್ಲಿರುವ ಆಡಿಯೋದಲ್ಲಿ ಹೇಳಲಾಗಿದೆ ಎಂದಿದ್ದಾರೆ.
ಸಿಎಂಗೆ ಪತ್ರ ಬರೆಯುವೆ:
ಈ ಬಗ್ಗೆ ಮಂಗಳೂರಿನಲ್ಲಿ ಸೋಮವಾರ ಸ್ಪಷ್ಟೀಕರಣ ನೀಡಿರುವ ನಳಿನ್ ಕುಮಾರ್ ಕಟೀಲು ಅವರು, ಆಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುತ್ತೇನೆ. ಪೂರ್ಣ ತನಿಖೆ ಆಗಬೇಕೆಂದು ಆಗ್ರಹಿಸುತ್ತೇನೆ. ತನಿಖೆಯಿಂದ ಆಡಿಯೋದ ಸತ್ಯಾಸತ್ಯತೆ ಹೊರಬರಲಿ. ಈ ರೀತಿಯ ಪ್ರಕರಣಗಳು ಹಿಂದೆ ಹತ್ತಾರು ಆಗಿವೆ. ಇದು ಸರಿಯಲ್ಲ. ಹಾಗಾಗಿ ತನಿಖೆಗೆ ಆಗ್ರಹಿಸಿದ್ದೇನೆ ಎಂದು ಹೇಳಿದರು.
ಅನಗತ್ಯ ವಿಚಾರಗಳಿಗೆ ಸ್ಪಷ್ಟನೆ ಬೇಡ:
ನಮ್ಮಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳೇ ಇಲ್ಲ. ಹಾಗಾಗಿ ಸಚಿವರನ್ನು ಕೈಬಿಡಲಾಗುವುದು ಎಂಬ ವಿಷಯವೇ ಅಪ್ರಸ್ತುತ. ನಮ್ಮ ಪಕ್ಷಕ್ಕೆ ಯಡಿಯೂರಪ್ಪ ಅವರು ಆತ್ಮ ಇದ್ದಂತೆ. ಅವರು ಹೋರಾಟದಿಂದ ಮೇಲೆ ಬಂದಿದ್ದಾರೆ. ಈಶ್ವರಪ್ಪ ಮತ್ತು ಜಗದೀಶ ಶೆಟ್ಟರ್ ಅವರು ಎರಡು ಕಣ್ಣುಗಳಿದ್ದಂತೆ. ಅವರೆಲ್ಲರ ಮಾರ್ಗದರ್ಶನದಲ್ಲಿ ನಮ್ಮ ಪಕ್ಷ, ಸರಕಾರ ನಡೆಯುತ್ತದೆಂದರು.
ಇಂತಹಾ ಯಾವುದೇ ಮಾತುಕತೆಗಳು ನಮ್ಮ ಪಕ್ಷದಲ್ಲಿ ಚರ್ಚೆ ಆಗಿಲ್ಲ. ನಮ್ಮೊಳಗೂ ಚರ್ಚೆ ಆಗಿಲ್ಲ. ಹಾಗಾಗಿ ಆಡಿಯೋ ಸತ್ಯಾಸತ್ಯತೆ ಬಗ್ಗೆ ತನಿಖೆ ಆಗಲಿ.
ತನಿಖೆ ಆಗದೇ ನಾನು ಯಾರ ಬಗ್ಗೆಯೂ ಸಂಶಯ ಪಡುವುದಿಲ್ಲ. ಈ ಬಗ್ಗೆ ಖಂಡಿತವಾಗಿಯೂ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ನಳಿನ್ ತಿಳಿಸಿದರು.
ನನ್ನ ಧ್ವನಿಯನ್ನು ಅನುಕರಿಸಿ ಪಕ್ಷಕ್ಕೆ ಧಕ್ಕೆ ತರುವ ಮಾದರಿಯಲ್ಲಿ ನಕಲಿ ಆಡಿಯೋವೊಂದನ್ನು ಯಾರೋ ಕಿಡಿಗೇಡಿಗಳು ವಾಟ್ಸಪ್ನಲ್ಲಿ ಹರಿಯಬಿಟ್ಟಿದ್ದು, ಇದರ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತೇನೆ. ಪಕ್ಷಕ್ಕೆ ಮತ್ತು ಸರಕಾರಕ್ಕೆ ಕೆಟ್ಟ ಹೆಸರು ತರುವ ದೃಷ್ಟಿಯಿಂದ ಈ ಆಡಿಯೋ ಹರಿಬಿಟ್ಟಿದ್ದು, ತನಿಖೆ ನಡೆಸಿದರೆ ಅದರ ನಕಲಿತನ ಸಾಬೀತಾಗಲಿದೆ. ಇದರ ಹಿಂದಿರುವ ಕಿಡಿಗೇಡಿಗಳು ಯಾರೆಂಬ ಕುರಿತು ತನಿಖೆ ನಡೆಸಲು ಒತ್ತಾಯಿಸುತ್ತೇನೆ.
ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷರು.