ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಬಕ್ರೀದ್ ಹಬ್ಬದ ಕಾರಣದಿಂದಲೂ ಗೋಹತ್ಯೆ ಮಾಡದಂತೆ ಆದೇಶ

*ಗೋಹತ್ಯೆ ನಿಷೇಧ ಕಾನೂನು ಪರಿಣಾಮಕಾರಿಯಾಗಿ ಜಾರಿ
*ಬಕ್ರೀದ್ ಕಾರಣದಿಂದಲೂ ಗೋಹತ್ಯೆ ಮಾಡುವಂತಿಲ್ಲ
*ಬಲಿಗಾಗಿ ಗೋವು ತರುವುದು, ಕಳುಹಿಸುವುದು ನಿಷೇಧ

ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಬಕ್ರೀದ್ ಹಬ್ಬದ ಕಾರಣದಿಂದಲೂ ಗೋಹತ್ಯೆ ಮಾಡದಂತೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಆದೇಶಿಸಿದ್ದಾರೆ.

ತ್ಯಾಗ ಮತ್ತು ಬಲಿದಾನದ ಹಬ್ಬವಾದ ಬಕ್ರೀದ್ ವೇಳೆಯಲ್ಲೂ ಗೋಹತ್ಯೆ ಮಾಡುವಂತಿಲ್ಲ. ಗೋಹತ್ಯೆ ನಿಷೇಧ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತದೆ. ರಾಜ್ಯದಿಂದ ಹೊರಗೆ ಅಥವಾ ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಯಾವುದೇ ಮಾರ್ಗದಿಂದ ಬಲಿಗಾಗಿ ಗೋವು ತರುವುದು ಅಥವಾ ಕಳುಹಿಸುವಂತಿಲ್ಲ. ಗೋಮಾಂಸ ಸಾಗಿಸುವುದರ ಮೇಲೆ ಇಲಾಖೆಯ ಅಕಾರಿಗಳು ಹದ್ದಿನ ಕಣ್ಣಿಡಲು ಸೂಚಿಸಿದ್ದಾರೆ.

ಒಂದು ವೇಳೆ ಎಲ್ಲಾದರೂ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿರುವುದು ಕಂಡುಬಂದಲ್ಲಿ ಗೋಪಾಲಕರು ಗೋರಕ್ಷಕರು ಹಾಗೂ ಸಾರ್ವಜನಿಕರು ಪಶುಸಂಗೋಪನೆ ಇಲಾಖೆಯ ಪ್ರಾಣಿ ಕಲ್ಯಾಣ ಸಹಾಯವಾಣಿಗೆ ತಿಳಿಸಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ. ಆದರೆ, ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವುದು ಬೇಡ ಎಂದು ಸಚಿವರು ಮನವಿ ಮಾಡಿದ್ದಾರೆ.

ವದಂತಿಗಳಿಗೆ ಕಿವಿ ಕೊಡಬೇಡಿ
ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಕದಡಲು ಅನೇಕರು ಸಾಮಾಜಿಕ ಜಾಲತಾಣವನ್ನು ಮಾಧ್ಯಮವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಾರೆ. ಗೋಹತ್ಯೆ ಕುರಿತಾಗಿ ಯಾವುದೇ ಸುಳ್ಳು ಸುದ್ದಿ ಅಥವಾ ಸಂದೇಶಗಳನ್ನು ಹರಿಬಿಡುವುದು ಸಮಾಜದಲ್ಲಿ ಅಶಾಂತಿ ನಿರ್ಮಿಸಲು ಪ್ರಯತ್ನಿಸುವುದು ಕಂಡುಬಂದಲ್ಲಿ ಪೊಲೀಸ್ ಇಲಾಖೆ ಅಂಥವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಿದೆ ಎಂದು ಸಚಿವ ಪ್ರಭು ಚಹಾಣ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ