ಬೆಳಗಾವಿ : ಮಾಜಿ ಸಚಿವ, ಚಿತ್ರನಟ ದಿ. ಅಂಬರೀಷ್ ಅವರ ಅಂತಿಮ ಸಂಸ್ಕಾರಕ್ಕೆ ವೆಚ್ಚವಾಗಿರುವ ಹಣವೆಷ್ಟು ಮತ್ತು ಈ ಹಣವನ್ನು ಭರಿಸಿದವರು ಯಾರು ಎಂಬುದರ ಮಾಹಿತಿ ಸರ್ಕಾರದ ಬಳಿ ಇಲ್ಲ. ಈ ಮಾಹಿತಿ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಕಚೇರಿಗೆ ಗೊತ್ತಿಲ್ಲ ಎನ್ನುವುದು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆರೋಪಿಸಿದ್ದಾರೆ.
ಅಂಬರೀಷ್ ಅವರ ಚಿಕಿತ್ಸೆಗೆ ಮತ್ತು ಅಂತಿಮ ಸಂಸ್ಕಾರಕ್ಕೆ ವೆಚ್ಚ ಮಾಡಿದ ಹಣದ ಬಗ್ಗೆ ಹಾಗೂ ಅಂಬರೀಷ್ ಸ್ಮಾರಕ ನಿರ್ಮಿಸಲು ಸರ್ಕಾರ ನಿಗದಿ ಪಡಿಸಿದ ಹಣದ ವಿವರ ನೀಡುವಂತೆ 2019 ಜನವರಿಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸಲಾಗಿತ್ತು. ಬೆಂಗಳೂರಿನ ವಿಕ್ರಮ್ ಆಸ್ಪತ್ರೆ, ಸಿಂಗಾಪೂರ ಆಸ್ಪತ್ರೆಗೆ ಸೇರಿ ಸರ್ಕಾರ 1,22,82,729 ರೂ. ಭರಿಸಿದೆ ಎಂದು ಅಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಅಂತಿಮ ಸಂಸ್ಕಾರ ವೆಚ್ಚ ಮಾಡಿದ ಮಾಹಿತಿಯನ್ನು ಮಂಡ್ಯ ಜಿಲ್ಲಾಕಾರಿಗಳಿಂದ ಮತ್ತು ಸ್ಮಾರಕಕ್ಕೆ ನಿಗದಿ ಮಾಡಿದ ಮೊತ್ತವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪಡೆದುಕೊಳ್ಳಬೇಕೆಂದು ತಿಳಿಸಿ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಅರ್ಜಿ ವರ್ಗಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಈ ಮಾಹಿತಿಗೆ ಲಿಖಿತ ಉತ್ತರ ನೀಡಿರುವ ಮಂಡ್ಯ ಜಿಲ್ಲಾಕಾರಿ ಅಂಬರೀಷ್ ಅವರ ಅಂತ್ಯಸಂಸ್ಕಾರಕ್ಕೆ ವೆಚ್ಚವಾದ ಹಣದ ಮಾಹಿತಿಯನ್ನು ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದ ಪಡೆಯುವಂತೆ 2019 ನವೆಂಬರ್ 11ರಂದು ಆದೇಶ ಮಾಡಿದ್ದಾರೆ.ಶ್ರೀ ಕಂಠೀರವ ಸ್ಟುಡಿಯೊ ನಿಯಮಿತ ಬೆಂಗಳೂರು ಇವರು ಸಹ ಅಂಬರೀಷ್ ಅವರ ಅಂತ್ಯ ಸಂಸ್ಕಾರದ ವೆಚ್ಚದ ಕುರಿತು ಒಬ್ಬರ ಕಡೆಗೆ ಒಬ್ಬರು ಬೆರಳು ಮಾಡಿ ತೋರಿಸುತ್ತಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಭೀಮಪ್ಪ ಗಡಾದ ಆರೋಪಿಸಿದ್ದಾರೆ.