ಶ್ರೀರಂಗ ಪಟ್ಟಣದ ಪಶ್ಚಿಮವಾಹಿನಿಯಲ್ಲಿ ಅಂಬರೀಶ್ ಅಸ್ಥಿ ವಿಸರ್ಜನೆ

ಬೆಂಗಳೂರು: ‘ರೆಬೆಲ್ ಸ್ಟಾರ್’ ಅಂಬರೀಶ್ ನಿಧನರಾಗಿ ಇಂದಿಗೆ ಐದು ದಿನಗಳು ಕಳೆದಿವೆ. ಇಂದು ಅವರ ಅಸ್ಥಿ ಪೂಜೆ ನೆರವೇರಿದೆ. ಅಂಬರೀಶ್ ಅಸ್ಥಿಯನ್ನು ಶ್ರೀರಂಗಪಟ್ಟಣದಲ್ಲಿರುವ ಪಶ್ಚಿಮವಾಹಿನಿಯಲ್ಲಿ ಬಿಡಲು ನಿರ್ಧರಿಸಲಾಗಿದೆ.
ಬುಧವಾರ ಹಾಲು-ತುಪ್ಪ ಬಿಡುವ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿತ್ತು. ಈ ಕಾರಣಕ್ಕೆ ಅಭಿಮಾನಿಗಳು ಹಾಲು-ತುಪ್ಪದ ಸಮೇತ ಕಂಠೀರವ ಸ್ಟುಡಿಯೋಗೆ ಬಂದಿದ್ದರು. ಆದರೆ 11ದಿನ ಈ ಶಾಸ್ತ್ರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಇಂದು ಅಸ್ಥಿ ಪೂಜೆ ಮಾತ್ರ ನೆರವೇರಲಿದೆ. ಅಂಬರೀಶ್ ಆಪ್ತರು ಸಮಾಧಿಗೆ ವಿವಿಧ ಹೂವುಗಳಿಂದ ಅಲಂಕಾರ ಮಾಡಿದ್ದರು. ಸಮಾಧಿ ಬಳಿ ಅಂಬರೀಶ್ ಅವರ ದೊಡ್ಡ ಭಾವಚಿತ್ರ ಅಳವಡಿಸಲಾಗಿದೆ. ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳ ದಂಡೇ ಹರಿದುಬಂದಿದೆ.
ಅಂಬರೀಶ್ ಆಪ್ತರು ಹಾಗೂ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸುಮಾರು 300 ಅಸನಗಳ ವ್ಯವಸ್ಥೆ ಮಾಡಲಾಗಿದೆ. ಅಂಬಿ ಪ್ರೀತಿಯಿಂದ ಸಾಕಿದ್ದ ನಾಯಿಗಳು ಮೂಕ ರೋಧನೆ ಮಾಡುತ್ತಿವೆ. ಪ್ರತೀ ದಿನ ಅಂಬಿ ಕನ್ವರ್ ಹಾಗೂ ಬುಲ್ ಬುಲ್ ಹೆಸರಿನ ನಾಯಿಗಳ ಜೊತೆ ವಾಕ್ ಮಾಡುತ್ತಿದ್ದರು.
ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದರು. ಕಂಠೀರವ ಸ್ಟೇಡಿಯಂ ಹಾಗೂ ಮಂಡ್ಯದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಜನಿಕಾಂತ್, ಚಿರಂಜೀವಿ ಸೇರಿದಂತೆ ಅನೇಕರು ಅಂಬಿ ಅಂತಿಮ ದರ್ಶನ ಪಡೆದಿದ್ದರು.
ಫಿಲ್ಮ್ ಚೇಂಬರ್ನಿಂದ ಶ್ರದ್ಧಾಂಜಲಿ: ನವೆಂಬರ್ 30ರಂದು ಫಿಲ್ಮ್ ಚೇಂಬರ್ ಅಂಬರೀಶ್ಗೆ ಶ್ರದ್ಧಾಂಜಲಿ ಅರ್ಪಿಸಲು ನಿರ್ಧರಿಸಿದೆ. ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 9 ಗಂಟೆಗೆ ಶ್ರದ್ಧಾಂಜಲಿ ಸಭೆ ಆರಂಭಗೊಳ್ಳಲಿದೆ. ಕನ್ನಡ ಚಿತ್ರರಂಗದ ತಾರೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿ.ಎಂ. ಕುಮಾರ ಸ್ವಾಮಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಂದು ಚಿತ್ರೀಕರಣ, ಪೋಸ್ಟಪ್ರೊಡಕ್ಷನ್ ಕೆಲಸಗಳಿಗೆ ರಜೆ ಘೋಷಿಸಲಾಗಿದೆ. ಸಿನಿಮಾ ಪ್ರ ರ್ದಶನ ಎಂದಿನಂತೆ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ