ಹೊಸದಿಲ್ಲಿ:ಪೂರ್ವಲಡಾಖ್ ಗಡಿ ಬಿಕ್ಕಟ್ಟಿನಲ್ಲಿ ಚೀನಾದ ಆಕ್ರಮಣ ಹಿಮ್ಮೆಟ್ಟಿಸಿ, ಹುತಾತ್ಮರಾದ ಭಾರತೀಯ ಸೇನೆಯ 16ಬಿಹಾರ ಬೆಟಾಲಿಯನ್ನ ಐವರು ಯೋಧರಿಗೆ ಗಣರಾಜ್ಯೋತ್ಸವದಂದು ಮರಣೋತ್ತರ ಶೌರ್ಯಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಭಾರತದ ಭೂ ಭಾಗವಾಗಿರುವ ಲಡಾಖ್ ಗಡಿಯ ಪೆಟ್ರೋಲಿಂಗ್ ಪಾಯಿಂಟ್14ರ ಬಳಿ ಚೀನಾ ಸೇನೆ ನಿಯೋಜನೆಗೊಂಡಿದ್ದು, ಗಡಿ ಪ್ರದೇಶದಿಂದ ಹಿಂದೆ ಸರಿಯುವಂತೆ ಭಾರತ ಕೇಳಿದರೂ,ಚೀನಾ ಉದ್ಧಟತನ ತೋರಿ ಬಿಕ್ಕಟ್ಟು ಸೃಷ್ಟಿಸಿತು.
ಚೀನಾದ ಉದ್ಧಟತನಕ್ಕೆ ಭಾರತವೂ ತಕ್ಕ ತಿರುಗೇಟು ನೀಡಿದ್ದು, ಚೀನಾ ಸೇನೆ(ಪಿಎಲ್ಎ) ಹಿಮ್ಮೆಟ್ಟಿಸುವ ಹೋರಾಟದಲ್ಲಿ ಹಲವು ಯೋಧರು ಹುತಾತ್ಮರಾಗಿದ್ದಾರೆ.ಈ ಪೈಕಿ 16ಬಿಹಾರ ಬೆಟಾಲಿಯನ್ನ ಯೋಧರು ಸೇರಿದ್ದು, 2021ರ ಗಣರಾಜ್ಯೋತ್ಸವದಂದು ಕರ್ನಲ್ ಬಿ ಸಂತೋಷ್ ಬಾಬು ಸೇರಿ ಐವರು ಯೋಧರಿಗೂ ಮರಣೋತ್ತರ ಶೌರ್ಯಪ್ರಶಸ್ತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.