3000 ಕೋಟಿ ವೆಚ್ಚದಲ್ಲಿ ಕೊಚ್ಚಿ-ಮಂಗಳೂರು ನಡುವೆ ನೈಸರ್ಗಿಕ ಅನಿಲ ಪೈಪ್‍ಲೈನ್ ದೇಶಕ್ಕೆ ಅರ್ಪಣೆ ಜನರ ಬದುಕು ಆಗಲಿದೆ ಸುಲಲಿತ: ಪ್ರಧಾನಿ ಮೋದಿ

ಮಂಗಳೂರು: ಮಂಗಳೂರು ಮತ್ತು ಕೇರಳದ ಕೊಚ್ಚಿ ನಡುವಿನ ಅನಿಲ ಕೊಳವೆ ಮಾರ್ಗ ಯೋಜನೆ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಇದರಿಂದ ದೇಶದಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಲಾಗಿದೆ. ಕರ್ನಾಟಕ ಮತ್ತು ಕೇರಳದ ಜನರಜೀವನ ಸುಲಲಿತವೆನಿಸಲಿದ್ದು, ಇದರಿಂದ ಬಡ,ಮಧ್ಯಮವರ್ಗದ ಜನರು ಮತ್ತು ಉದ್ಯಮರಂಗದ ವೆಚ್ಚ ಕಡಿಮೆಯಾಗಲಿದೆ .`ಒಂದು ರಾಷ್ಟ್ರ ಒಂದೇ ಅನಿಲ ಜಾಲ’ ಸಾಸಲು ಈ ಯೋಜನೆಯಿಂದ ಸಾಧ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊಚ್ಚಿ-ಮಂಗಳೂರು ನಡುವೆ ಗೈಲ್ ಸಂಸ್ಥೆಯ ವತಿಯಿಂದ 3,000 ಕೋ.ರೂ. ವೆಚ್ಚದಲ್ಲಿ 450 ಕಿ.ಮೀ. ಉದ್ದದ ಸಿಎನ್‍ಜಿ ಕೊಳವೆ ಮಾರ್ಗವನ್ನು ಮಂಗಳವಾರ ವಿಡಿಯೋ ಕಾನರೆನ್ಸ್ ಮೂಲಕ ದೇಶಕ್ಕೆ ಸಮರ್ಪಿಸಿದ ಬಳಿಕ ಅವರು ಮಾತನಾಡಿದರು.
ದೇಶದ ಇತಿಹಾಸದಲ್ಲಿ ಇದೊಂದು ಮಹತ್ವದ ದಿನವಾಗಿದೆ. ಆತ್ಮನಿರ್ಭರತೆಯ ಅನ್ವೇಷಣೆಯಲ್ಲಿ ಹೆಗ್ಗುರುತು ಮೂಡಿಸುವ ದಿನ ಇದಾಗಿದೆ. ಪರಿಸರಕ್ಕೆ ಪೂರಕವಾದ ಇಂತಹ ಯೋಜನೆಯ ಮೂಲಕ ನೈಸರ್ಗಿಕ ಅನಿಲ ಆಧರಿತ ಆರ್ಥಿಕತೆಗೆ ಬದಲಾಗಲು ಕೇಂದ್ರ ಸರ್ಕಾರ ಕಾರ್ಯಕ್ರಮ ಹಾಕಿಕೊಂಡಿದೆ. ದೇಶದ ಇಂಧನ ಬಳಕೆಯಲ್ಲಿ ನೈಸರ್ಗಿಕ ಅನಿಲದ ಪಾಲನ್ನು ಪ್ರಸ್ತುತ ಇರುವ ಶೇ.6ರಿಂದ ಶೇ.15ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಸಾವಿರಾರು ಕೋ.ರೂ. ಮೊತ್ತದ ಹೂಡಿಕೆ ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಈ ಯೋಜನೆ ಕೇವಲ ಅನಿಲ ಕೊಳವೆ ಮಾರ್ಗವಲ್ಲ, ಬದಲಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಪರಿಸರ ಮಾಲಿನ್ಯ ಕಡಿಮೆ ಮಾಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ. 21ನೆಯ ಶತಮಾನದಲ್ಲಿ ಸಂಪರ್ಕ ಮತ್ತು ಶುದ್ಧ ಇಂಧನ ಬಳಕೆಗೆ ಹೆಚ್ಚು ಮಹತ್ವ ನೀಡುವ ದೇಶಗಳು ಮತ್ತಷ್ಟು ಎತ್ತರಕ್ಕೆ ತಲುಪಲಿವೆ ಎಂದು ವಿಶ್ವದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ವೇಗಗತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇಂತಹ ಕಾಮಗಾರಿಗಳು ಈ ಹಿಂದಿನ ದಶಕಗಳಲ್ಲಿ ಯಾವತ್ತೂ ಕಂಡಿರಲಿಲ್ಲ ಎಂದು ಪ್ರಧಾನಿ ಮೋದಿ ನುಡಿದರು.
16 ಸಾವಿರ ಕಿ.ಮೀ.ಉದ್ದದ ಪೈಪ್‍ಲೈನ್
2014ರ ಮುಂಚಿನ 27 ವರ್ಷಗಳಲ್ಲಿ ಕೇವಲ 15 ಸಾವಿರ ಕಿಲೊಮೀಟರ್‍ಗಳಷ್ಟು ಉದ್ದದ ನೈಸರ್ಗಿಕ ಅನಿಲ ಕೊಳವೆ ಮಾರ್ಗ ನಿರ್ಮಿಸಲಾಗಿತ್ತು. ಆದರೆ, ಈಗ ದೇಶದಾದ್ಯಂತ 16 ಸಾವಿರ ಕಿಲೊಮೀಟರ್‍ಗಳಷ್ಟು ಉದ್ದದ ನೈಸರ್ಗಿಕ ಅನಿಲ ಪೈಪ್‍ಲೈನ್ ಅಳವಡಿಕೆ ಕಾಮಗಾರಿಗಳು ಜಾರಿಯಲ್ಲಿ ಇವೆ. ಈ ಕಾಮಗಾರಿಗಳು ಮುಂದಿನ 5 ರಿಂದ 6 ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಹೇಳಿದ ಪ್ರಧಾನಿಯವರು, 2014ರಲ್ಲಿ 900ರಷ್ಟಿದ್ದ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ಸ್ಟೇಷನ್‍ಗಳು ಈಗ 6 ವರ್ಷಗಳಲ್ಲಿ 1,500 ಸ್ಟೇಷನ್ ನಿರ್ಮಾಣಗೊಂಡಿದೆ. ಇದನ್ನು 10 ಸಾವಿರಕ್ಕೆ ಹೆಚ್ಚಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
450 ಕಿ.ಮೀ ಉದ್ದದ ಕೊಳವೆ ಮಾರ್ಗ
ಸುಮಾರು 450 ಕಿ.ಮೀ. ಉದ್ದದ ಈ ಕೊಳವೆ ಮಾರ್ಗವನ್ನು ಜಿಎಐಎಲ್ (ಇಂಡಿಯಾ) ಲಿ. ನಿರ್ಮಿಸಿದೆ. ಇದು ಪ್ರತಿನಿತ್ಯ 12 ದಶಲ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ಅನಿಲ ಸಾಗಿಸುವ ಸಾಮಥ್ರ್ಯವನ್ನು ಹೊಂದಿದೆ. ಕೇರಳದ ಕೊಚ್ಚಿಯ ಧ್ರವೀಕೃತ ನೈಸರ್ಗಿಕ ಅನಿಲ (ಎನ್‍ಎನ್‍ಜಿ) ಮರುಹೊಂದಾಣಿಕೆ ಟರ್ಮಿನಲ್‍ನಿಂದ ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಮೂಲಕ ಹಾದು ಕರ್ನಾಟಕದ, ದ.ಕ. ಮಂಗಳೂರಿಗೆ ನೈಸರ್ಗಿಕ ಅನಿಲವನ್ನು ಸಾಗಿಸುತ್ತದೆ. ಯೋಜನೆಯ ಒಟ್ಟು ವೆಚ್ಚ ಸುಮಾರು 3,000 ಕೋ.ರೂ.ಗಳಾಗಿದ್ದು, ಅದರ ನಿರ್ಮಾಣ 12  ಮಾನವ-ದಿನಗಳ ಉದ್ಯೋಗವನ್ನು ಸೃಷ್ಟಿಸಿತ್ತು. ಕೊಳವೆ ಮಾರ್ಗ ಅಳವಡಿಕೆಯು ಸವಾಲಿನ ವಿಷಯವಾಗಿತ್ತು. ಏಕೆಂದರೆ ಕೊಳವೆ ಮಾರ್ಗ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಲಮೂಲಗಳನ್ನು ದಾಟುವುದು ಅನಿವಾರ್ಯವಾಗಿತ್ತು ಎಂದು ಪ್ರಧಾನಿ ಮೋದಿ ಯೋಜನೆಯ ಮಾಹಿತಿ ನೀಡಿದರು.
ಬ್ಲೂ ಇಕಾನಮಿ ಗುರಿ
ಕೇರಳ-ಕರ್ನಾಟಕದ ಬೀಚ್ ನಗರಗಳನ್ನು `ಬ್ಲೂ ಇಕಾನಮಿ’ ಮಾಡುವ ಗುರಿ ಹೊಂದಲಾಗಿದೆ. ಇದು ಆತ್ಮನಿರ್ಭರ ಭಾರತದ ಭಾಗವಾಗಿದೆ. ಕರಾವಳಿಯಲ್ಲಿ ಬಹುವಿಧ ಸಂಪರ್ಕ, ಕರಾವಳಿ ರಸ್ತೆ ನಿರ್ಮಾಣಗಳಿಗೆ ಒತ್ತು ನೀಡಲಾಗಿದೆ ಎಂದು ಪ್ರಧಾನಿ ಇದೇ ಸಂದರ್ಭ ಹೇಳಿದರು.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇರಳ ಮುಖ್ಯಮಂತ್ರಿ,ಪಿಣರಾಯಿ ವಿಜಯನ್, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ವಿಡಿಯೋ ಕಾನರೆನ್ಸ್‍ನಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ