ಬೆಂಗಳೂರು: ಮುಂದಿನ ಆಯ-ವ್ಯಯದಲ್ಲಿ ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ 100 ಕೋಟಿ ರೂ. ಮೀಸಲಿಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.
ಬೆಂಗಳೂರಿನ ಮಡಿವಾಳದಲ್ಲಿ ನೂತನವಾಗಿ ನಿರ್ಮಿಸಿದ ಪೊಲೀಸ್ ಸಮುದಾಯ ಭವನ ಹಾಗೂ ನ್ಯಾಯ ವಿಜ್ಞಾನ ಪ್ರಯೋಗಾಲಯ ನಿರ್ದೇಶನಾಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಇಲಾಖೆಗೆ ಸುಸಜ್ಜಿತ ಕಟ್ಟಡ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒದಗಿಸುವ ಮೂಲಕ ನ್ಯಾಯ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುತ್ತಿದೆ. ಮುಂದಿನ ಆಯವ್ಯಯದಲ್ಲಿ ಇಲಾಖೆಗೆ 100ಕೋಟಿ ರೂ. ಮೀಸಲಿಡುವಂತೆ ಗೃಹಸಚಿವರು ಮನವಿ ಮಾಡಿದ್ದಾರೆ. ಈ ಬಗ್ಗೆ ಮುಂದಿನ ಬಜೆಟ್ ವೇಳೆಯಲ್ಲಿ ಗಮನ ಹರಿಸುತ್ತೇನೆ ಎಂದರು.
ನ್ಯಾಯ ವಿಜ್ಞಾನ ಪ್ರಯೋಗಾಲಯ ನಿರ್ದೇಶನಾಲಯ ನಿರ್ಮಾಣವು ಪೊಲೀಸ್ ಇಲಾಖೆಯನ್ನು ಆಧುನೀಕರಣಗೊಳಿಸುವಲ್ಲಿ ಇಡಲಾದ ವಿನೂತ ಹೆಜ್ಜೆಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಎಷ್ಟು ಮುಖ್ಯವೋ ಅಪರಾಧಗಳನ್ನು ತಡೆಯುವುದು, ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗದಂತೆ ಉತ್ತಮವಾಗಿ ತನಿಖೆ ನಡೆಸುವುದು ಅಷ್ಟೇ ಮುಖ್ಯವಾಗಿದೆ. ಅಪರಾಧಗಳು ನಡೆದ ಸ್ಥಳದಲ್ಲಿ ಲಭ್ಯವಾಗುವ ಸಾಕ್ಷಿಗಳನ್ನು ವೈಜ್ಞಾನಿಕ ಸಾಬೀತಾದ ಅಂಶಗಳ ಆಧಾರದ ಮೇಲೆ ನ್ಯಾಯಾಲಯಕ್ಕೆ ವರದಿ ನೀಡುವಲ್ಲಿ ನ್ಯಾಯ ವಿಜ್ಞಾನ ಪ್ರಯೋಗಾಲಯ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಸೈಬರ್ ಅಪರಾಧಗಳು ಸವಾಲಾಗಿ ಪರಿಣಮಿಸಿದ್ದು, ವಿಜ್ಞಾನ ಉಪಯೋಗಿಸಿಕೊಂಡು ಎಸಗಲಾಗುತ್ತಿರುವ ಅಪರಾಧಗಳನ್ನು ವಿಜ್ಞಾನದ ಸಾಧನದಿಂದಲೇ ಪತ್ತೆ ಮಾಡಲಾಗುತ್ತಿದೆ. ಕರ್ನಾಟಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಇದುವರೆಗೆ ಸಾವಿರಾರೂ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಅಪರಾಗಳಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.
ಗೃಹಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಇನ್ನೂ 5 ಲ್ಯಾಬ್ಗಳು ನಿರ್ಮಾಣ ಮಾಡಲಿದ್ದು, ಪ್ರತಿ ಜಿಲ್ಲೆಗೊಂದರಂತೆ ಲ್ಯಾಬ್ ತೆರೆಯಲು ಚಿಂತನೆ ನಡೆಸಲಾಗುತ್ತಿದೆ. ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವುದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ 100 ನಂಬರ್ಗೆ ಕರೆ ಮಾಡಿ ಸೈಬರ್ ಅಪರಾಧಗಳ ಬಗ್ಗೆ ದೂರು ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸೈಬರ್ ಅಪರಾಧ ಕೃತ್ಯಗಳನ್ನು ನಡೆಸಿದ ಅಪರಾಗಳ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡುವಂತಹ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕಾಗಿ ಸಂಬಂಧಪಟ್ಟ ಬ್ಯಾಂಕ್ ಅಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.