ಬೆಂಗಳೂರು: ಡಿಜಿಟಲ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ಪರಿಕಲ್ಪನೆಯಲ್ಲಿ ಕರ್ನಾಟಕ ಅಭಿವೃದ್ಧಿಯತ್ತ ಹೆಜ್ಜೆಯಿಟ್ಟಿದೆ. ಮುಂದಿನ ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆ ಗುರಿ ಸಾಸಲಾಗುವುದು ಎಂದು ವಿದ್ಯುನ್ಮಾನ ,ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಗುರುವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನದ ಟೆಕ್ ಸಮ್ಮಿಟ್-2020 ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೊರೋನಾ ಸಂದರ್ಭದಲ್ಲಿಯೂ ಅನೇಕ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆಗೆ ಆಗಮಿಸುತ್ತಿವೆ. ಸದ್ಯಕ್ಕೆ 52 ಶತಕೋಟಿ ಡಾಲರ್ ನಷ್ಟು ಡಿಜಿಟಲ್ ಆರ್ಥಿಕತೆಯ ಗುರಿಯನ್ನು ರಾಜ್ಯವು ದಾಟಿದೆ. ಮುಂದಿನ ಐದು ವರ್ಷದಲ್ಲಿ ಹಾಕಿಕೊಂಡಿರುವ ಗುರಿ ಮುಟ್ಟಲು ಎಲ್ಲ ರೀತಿಯ ಕ್ರಮವನ್ನು ಸರಕಾರ ಕೈಗೊಂಡಿದೆ ಎಂದರು.
ಡಿಜಿಟಲ್ ಆರ್ಥಿಕತೆ ಗುರಿಗೆ ಹೆಚ್ಚಿನ ಕೊಡುಗೆ:
ನರೇಂದ್ರ ಮೋದಿ ಅವರು ನಿಗದಿಪಡಿಸಿರುವ ಒಂದು ಟ್ರಿಲಿಯನ್ ಡಿಜಿಟಲ್ ಆರ್ಥಿಕತೆಯ ಗುರಿಗೆ ಹೆಚ್ಚಿನ ಕೊಡುಗೆ ನೀಡಲು ಕರ್ನಾಟಕ ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಸುಧಾರಣೆಗಳನ್ನು ಕೈಗೊಂಡು ಐಟಿ-ಬಿಟಿ ಸೇರಿದಂತೆ ಸರ್ವ ಕ್ಷೇತ್ರಗಳಲ್ಲೂ ಸುಧಾರಣೆಗಳನ್ನು ತರಲಾಗಿದೆ ಎಂದರು.