ಬೆಂಗಳೂರು: ಸರ್ಕಾರಿ ಸವಲತ್ತುಗಳ ವಿತರಣೆಗೆ ಕುಟುಂಬ ಗುರುತಿನ ಚೀಟಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಪಡಿತರ ಚೀಟಿಯ ಸಂಖ್ಯೆಯನ್ನೇ ಕುಟುಂಬ ಗುರುತಿನ ಸಂಖ್ಯೆಯಾಗಿ ಪರಿಗಣಿಸಲು ನಿರ್ಧರಿಸಲಾಗಿದೆ.
ಗುರುವಾರ ಕುಟುಂಬ ಗುರುತಿನ ಚೀಟಿ ನೀಡುವ ಯೋಜನೆ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಹಿರಿಯ ಅಕಾರಿಗಳೊಂದಿಗೆ ಸಭೆ ನಡೆಸಿದ್ದು ಸರ್ಕಾರದ ವಿವಿಧ ಇಲಾಖೆಗಳು ನೀಡುವ ಯೋಜನೆಗಳು ಫಲಾನುಭವಿಗಳಿಗೆ ದೊರೆಯುವ ಸಲುವಾಗಿ ಈ ಚೀಟಿಯನ್ನು ಜಾರಿಗೆ ತರುವಂತೆ ಅಕಾರಿಗಳಿಗೆ ಸೂಚಿಸಿದ್ದಾರೆ.
ಯೋಜನೆಗಳು ತಲುಪಲು ಸಹಕಾರಿ:
ಸರ್ಕಾರದ ವಿವಿಧ ಇಲಾಖೆಗಳು ನೀಡುವ ಯೋಜನೆಗಳ ಫಲಾನುಭವಿಗಳ ಸಮಗ್ರ ಮಾಹಿತಿ ಹೊಂದಲು, ಸವಲತ್ತುಗಳು ಅರ್ಹರಿಗೆ ತಲುಪುವಂತೆ ಮಾಡಲು ಹಾಗೂ ವಿವಿಧ ಸೌಲಭ್ಯ ವಂಚಿತರನ್ನು ಗುರುತಿಸಲು ಕುಟುಂಬ ಗುರುತಿನ ಚೀಟಿ ನೀಡುವ ಯೋಜನೆ ಸಹಕಾರಿಯಾಗಲಿದ್ದು, ಸರ್ಕಾರ ತನ್ನ ಬಳಿ ಹೊಂದಿರುವ ಕುಟುಂಬಗಳ ದತ್ತಾಂಶದಿಂದಾಗಿ ಯೋಜನೆಗಳನ್ನು ಇನ್ನಷ್ಟು ನಿಖರವಾಗಿ ರೂಪಿಸಲು ಅವಕಾಶವಾಗಲಿದೆ. ಸರ್ಕಾರಿ ಸವಲತ್ತುಗಳ ವಿತರಣೆಗೆ ಕುಟುಂಬ ಗುರುತಿನ ಚೀಟಿ ಹೊಸ ಆಯಾಮ ನೀಡಲಿದೆ. ಆದ್ದರಿಂದ ಈ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳು ಅಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆನ್ಲೈನ್ ಮೂಲಕ ನೋಂದಾಯಿಸಿ:
ಈ ಯೋಜನೆಯಲ್ಲಿ ಪಡಿತರ ಚೀಟಿ ಸಂಖ್ಯೆಯನ್ನೇ ಕುಟುಂಬ ಗುರುತಿನ ಸಂಖ್ಯೆಯಾಗಿ ಪರಿಗಣಿಸಲು ತೀರ್ಮಾನಿಸಲಾಗಿದೆ. ಪಡಿತರ ಚೀಟಿ ಹೊಂದಿಲ್ಲದವರು ಆನ್ಲೈನ್ ಮೂಲಕ ನೋಂದಾಯಿಸಿ, ಗುರುತಿನ ಸಂಖ್ಯೆ ಪಡೆಯಲು ಕ್ರಮ ವಹಿಸುವಂತೆ ಅಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದಲ್ಲದೇ, ಸಭೆಯಲ್ಲಿ ಎಲ್ಲ ಇಲಾಖೆಗಳ ವ್ಯಾಪ್ತಿಯ ಸಾರ್ವಜನಿಕ ಕುಂದು ಕೊರತೆ ನಿವಾರಣೆಗೆ ಏಕೀಕೃತ ವೇದಿಕೆಯನ್ನು ಸೃಷ್ಟಿಸುವ ಕುರಿತು ಚರ್ಚಿಸಲಾಗಿದೆ.
ಮುಖ್ಯಮಂತ್ರಿಯವರ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಇ-ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಸೇರಿದಂತೆ ಹಿರಿಯ ಅಕಾರಿಗಳು ಭಾಗವಹಿಸಿದ್ದರು.