ಬೆಂಗಳೂರು: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜೀತ್ ಪವಾರ್ ಬೆಂಕಿ ಹಚ್ಚುವ ಕೆಲಸ ಮಾಡಿದ್ದು ಇನ್ನುಮುಂದೆ ಇಂತಹ ಉದ್ಧಟನದ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮರಾಠ ಸಮುದಾಯದ ಹಿಂದುಳಿದ ಜನರ ಅಭಿವೃದ್ಧಿಗಾಗಿ ನಿಗಮ ಮಾಡಲಾಗುತ್ತಿದೆ. ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮರಾಠರು ಕಟ್ಟಾ ಹಿಂದುತ್ವವಾದಿಗಳು. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇನೆ. ಗಡಿ ವಿಚಾರದಲ್ಲಿ ಮಹಾಜನ್ ಆಯೋಗ ನೀಡಿರುವ ವರದಿಯೇ ಅಂತಿಮ ಎಂದರು.
ಯಾವುದೇ ಕಾರಣಕ್ಕೂ 5ನೇ ತಾರೀಕು ರಾಜ್ಯ ಬಂದ್ಗೆ ಅವಕಾಶವಿಲ್ಲ. ಇದು ಭಾಷೆಗಾಗಿ ನಿಗಮ ಸ್ಥಾಪಿಸಲಾಗುತ್ತಿಲ್ಲ. ಜನಾಂಗದ ಅಭಿವೃದ್ಧಿಗೆ ಮಾಡಲಾಗಿದ್ದು ಇದರಲ್ಲಿ ಬಲವಂತದ ಬಂದ್ ನಡೆಸುವುದಕ್ಕೆ ಅವಕಾಶವಿಲ್ಲ. ನಿಯಮ ಮೀರಿ ಪ್ರತಿಭಟನೆ ನಡೆಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿವಿಧ ಜನಾಂಗದಿಂದ ನಿಗಮ ರಚನೆಗೆ ಒತ್ತಾಯ
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಮರಾಠ ಸಮುದಾಯ ನಿಗಮ ರಚನೆ ಬೆನ್ನಲ್ಲೇ ವಿವಿಧ ಸಮುದಾಯಗಳು ತಮಗೂ ಅಭಿವೃದ್ದಿ ನಿಗಮ ರಚಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ರಾಜ್ಯ ಒಕ್ಕಲಿಗರ ಒಕ್ಕೂಟ ಕರ್ನಾಟಕ , ರಾಜ್ಯದಲ್ಲಿ ಒಕ್ಕಲಿಗರ ಸರ್ವತೋಮುಖ ಅಭಿವೃದ್ದಿಗೆ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ನೀಡಬೇಕು. ಮೀಸಲಾತಿ ಜಾರಿಗೆ ಬರುವವರೆಗೆ 1 ಸಾವಿರ ಕೋಟಿ ಅನುದಾನದೊಂದಿಗೆ ಒಕ್ಕಲಿಗರ ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಕರ್ನಾಟಕ ದಿಗಂಬರ ಜೈನ ಸಮುದಾಯಕ್ಕೆ ವಿಶೇಷ ಮೀಸಲಾತಿ ನೀಡಬೇಕು ಹಾಗೂ 100 ಕೋಟಿ ಅನುದಾನ ಕೊಡುವಂತೆ ಮುಖ್ಯಮಂತ್ರಿಗಳಿಗೆ ಜೈನ ಸಮುದಾಯ ಮನವಿ ಮಾಡಿದೆ.
ನಿಗಮಗಳ ರಚನೆಗೆ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು ಚುನಾವಣೆಯನ್ನು ಸಾಧನೆಗಳಿಂದ ಗೆಲ್ಲಲಾರದ ಬಿಜೆಪಿ ಅಗ್ಗದ ತಂತ್ರ ಕುತಂತ್ರಗಳನ್ನು ಮಾಡಿ ಸಮಾಜ ಒಡೆಯುವ ಕೆಲಸಕ್ಕೆ ಹೊರಟಿದೆ. ಗಡಿಭಾಗದಲ್ಲಿ ಮರಾಠಿಗರು-ಕನ್ನಡಿಗರ ನಡುವೆ ಸಂಘರ್ಷವುಂಟಾದರೂ ರಾಜ್ಯಾದ್ಯಂತ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಅನಗತ್ಯವಾಗಿ ನಿಗಮ ರಚಿಸುವ ಮೂಲಕ ಕನ್ನಡಿಗರನ್ನು ಕೆರಳಿಸುವ ಮೂರ್ಖತನಕ್ಕೆ ಸರ್ಕಾರ ಮುಂದಾಗಿದ್ದು ಶಾಂತಿ-ಸುವ್ಯವಸ್ಥೆಗೆ ಭಂಗವುಂಟಾದರೆ ಮುಖ್ಯಮಂತ್ರಿಗಳೇ ಹೊಣೆಯಾಗುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.