ನ.19ರಂದು ‘ನೆಕ್ಟ್ ಇಸ್ ನೌ’ ಬೆಂಗಳೂರು ಟೆಕ್ ಶೃಂಗಸಭೆಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಬೆಂಗಳೂರು ಟೆಕ್ ಶೃಂಗಸಭೆ 2020ರ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 19ರಂದು ಮಧ್ಯಾಹ್ನ 12:00 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಬೆಂಗಳೂರು ಟೆಕ್ ಶೃಂಗಸಭೆಯು 2020ರ ನವೆಂಬರ್ 19 ರಿಂದ 21 ರವರೆಗೆ ನಡೆಯಲಿದೆ. ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್), ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮದ ವಿಷನ್ ಗ್ರೂಪ್, ಭಾರತ ಸಾಫ್ಟ್‍ವೇರ್ ತಂತ್ರಜ್ಞಾನ ಪಾರ್ಕ್ (ಎಸ್‍ಟಿಪಿಐ) ಮತ್ತು ಎಂಎಂ ಆಕ್ಟಿವ್ ಸೈ-ಟೆಕ್ ಕಮ್ಯುನಿಕೇಷನ್ಸ್ ಸಹಯೋಗದಲ್ಲಿ ಕರ್ನಾಟಕ ಸರ್ಕಾರವು ಈ ಶೃಂಗಸಭೆ ಆಯೋಜಿಸಿದೆ.
ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಶ್ರೀ ಸ್ಕಾಟ್ ಮಾರಿಸನ್, ಸ್ವಿಸ್ ಒಕ್ಕೂಟದ ಉಪಾಧ್ಯಕ್ಷ ಶ್ರೀ ಗೈ ಪಾರ್ಮೆಲಿನ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಗಣ್ಯರು ಭಾಗವಹಿಸಲಿದ್ದಾರೆ. ಉದ್ಯಮದ ನಾಯಕರು, ತಂತ್ರಜ್ಞರು, ಸಂಶೋಧಕರು, ನಾವೀನ್ಯಕಾರರು, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ಭಾರತ ಮತ್ತು ಜಗತ್ತಿನ ಶಿಕ್ಷಣ ತಜ್ಞರು ಸಹ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ವರ್ಷದ ಶೃಂಗಸಭೆಯ ವಿಷಯ “ಮುಂದಿನದು ಈಗಲೇ” (ನೆಕ್ಟ್ ಇಸ್ ನೌ). ಕೋವಿಡ್-19 ಸಾಂಕ್ರಾಮಿಕದ ನಂತರ ಜಗತ್ತಿನ ಪ್ರಮುಖ ಸವಾಲುಗಳ ಕುರಿತು ಶೃಂಗಸಭೆಯ ಚರ್ಚೆ ನಡೆಸುತ್ತದೆ. `ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್’ ಹಾಗೂ `ಜೈವಿಕ ತಂತ್ರಜ್ಞಾನ’ ಕ್ಷೇತ್ರಗಳಲ್ಲಿ ಪ್ರಮುಖ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳ ಪರಿಣಾಮಗಳನ್ನು ಕುರಿತು ಶೃಂಗಸಭೆಯು ಚರ್ಚಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ